×
Ad

ವಿಶ್ವ ಮಾಸ್ಟರ್ಸ್ ಚಾಂಪಿಯನ್‍ಶಿಪ್‍ನಲ್ಲಿ ಎರಡು ಕಂಚು ಗೆದ್ದ ಕೇರಳದ 81 ವರ್ಷದ ಮಾಜಿ ಶಾಸಕ

Update: 2022-07-12 11:53 IST
Photo: Oneindia.malayalam

ತಿರುವನಂತಪುರಂ: ಕೇರಳದ ಪಿರಾವೋಂ ಕ್ಷೇತ್ರದ ಮಾಜಿ ಶಾಸಕ ಎಂ ಜೆ ಜೇಕಬ್ ಅವರು ಇತ್ತೀಚೆಗೆ ಫಿನ್‍ಲ್ಯಾಂಡ್‍ನಲ್ಲಿ ನಡೆದ ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ 2022ರಲ್ಲಿ 200 ಮೀಟರ್ ಮತ್ತು 80 ಮೀಟರ್ ಓಟದ ಸ್ಪರ್ಧೆಗಳಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದು ತಮ್ಮ ರಾಜ್ಯಕ್ಕೆ ಹೆಮ್ಮೆಯುಂಟು ಮಾಡಿದ್ದಾರೆ. ಈಗಾಗಲೇ ಹಲವು ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಹಾಗೂ ಏಷ್ಯನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನಶಿಪ್‍ನಲ್ಲಿ ವಿಜೇತರಾಗಿರುವ ಜೇಕಬ್ ಅವರು ಜಾಗತಿಕ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ.

ಈ ಹಿಂದೆ ಕೂಡ ಅವರು ಫ್ರಾನ್ಸ್, ಆಸ್ಟ್ರೇಲಿಯಾ, ಸ್ಪೇನ್‍ನಲ್ಲಿ ನಡೆದ ಮಾಸ್ಟರ್ಸ್ ಅಥ್ಲೆಟಿಕ್ಸ್‍ನಲ್ಲಿ ಹಾಗೂ ಜಪಾನ್, ಸಿಂಗಾಪುರ್, ಚೀನಾ ಮತ್ತು ಮಲೇಷಿಯಾದ ಏಷ್ಯನ್ ಮಾಸ್ಟರ್ಸ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಚೆನ್ನೈಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲೂ ಅವರು ಜಯ ಗಳಿಸಿದ್ದರು.

ಪ್ರತಿ ದಿನ ಬೆಳಿಗ್ಗೆ 4 ಗಂಟೆಗೆ ಎದ್ದು ಅಭ್ಯಾಸ ಮಾಡುವ ಜೇಕಬ್ ಕೆಲವೊಮ್ಮೆ ಯೋಗ ಕೂಡ ಮಾಡುತ್ತಾರೆ. ತಮ್ಮ ಶಾಸಕರ ನಿಧಿ ಬಳಸಿ ಮಣಿಮಲಕುನ್ನು ಸರಕಾರಿ ಕಾಲೇಜು ಸ್ಟೇಡಿಯಂ ನಿರ್ಮಿಸುವಲ್ಲಿ ಜೇಕಬ್ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲೇ ಕೆಲವೊಮ್ಮೆ ಅವರು ಅಭ್ಯಸಿಸುತ್ತಾರೆ.

ಶಾಲೆಯಲ್ಲಿರುವಾಗಲೇ ಅವರು ಅಥ್ಲೆಟಿಕ್ಸ್ ನಲ್ಲಿ ಚಾಂಪಿಯನ್ ಆಗಿದ್ದರು. ವಿಶ್ವವಿದ್ಯಾಲಯ ಮಟ್ಟದಲ್ಲಿ 400 ಮೀಟರ್ ಹರ್ಡಲ್ಸ್‍ನಲ್ಲಿ ಅವರು ದಾಖಲೆ ಸೃಷ್ಟಿಸಿದ್ದರು.

ಮುಂದೆ ಎತ್ತಿನ ಗಾಡಿಯೊಂದರ ಬದಿಯಲ್ಲಿ ಓಡುವಾಗ ಅವರ ಕಾಲಿನ ಮೇಲೆ ಚಕ್ರ ಹರಿದು ಗಾಯಗೊಂಡ ನಂತರ ಅವರು ಅಥ್ಲೆಟಿಕ್ಸ್‍ನಿಂದ ದೂರ ಸರಿದು ರಾಜಕೀಯದತ್ತ ವಾಲಿದ್ದರು.

2006ರಲ್ಲಿ ಅವರು ಪಿರವೊಮ್ ಕ್ಷೇತ್ರದಲ್ಲಿ  ನಾಲ್ಕು ಬಾರಿಯ ಶಾಸಕ ಟಿ ಎಂ ಜೇಕಬ್ ಅವರನ್ನು ಸೋಲಿಸಿ ಸಿಪಿಐ(ಎಂ) ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಶಾಸಕರಾಗಿದ್ದ ವೇಳೆ ಅವರ  ಹಳೆಯ ಸ್ನೇಹಿತರು ಎರ್ಣಾಕುಳಂನ ಮಹಾರಾಜ ಕಾಲೇಜಿನಲ್ಲಿ ನಡೆದ ಅಥ್ಲೆಟಿಕ್ಸ್ ಸ್ಪರ್ಧೆಯ ಉದ್ಘಾಟನೆಗೆ ಅವರನ್ನು ಆಹ್ವಾನಿಸಿದ್ದರು. ಉದ್ಘಾಟನೆ ನಂತರ 100 ಮೀಟರ್ ಓಟದಲ್ಲಿ ಅವರು ಉತ್ಸಾಹದಿಂದಲೇ ಪಾಲ್ಗೊಂಡರು. ಇದು ಅವರು ಕ್ರೀಡೆಯಲ್ಲಿ ಮತ್ತೆ ಆಸಕ್ತಿ ವಹಿಸಲು ಸ್ಫೂರ್ತಿಯಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News