ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅನುದಾನ ಹಂಚಿಕೆ; ಉಡುಪಿ ಜಿಲ್ಲೆ ಅಲ್ಪಸಂಖ್ಯಾತರಿಗೆ ಅನ್ಯಾಯ: ಆರೋಪ

Update: 2022-07-13 15:41 GMT

ಉಡುಪಿ : ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ೨೦೨೨-೨೩ನೆ ಸಾಲಿಗೆ ಅಲ್ಪಸಂಖ್ಯಾತರ ಸಮುದಾಯದ ಜನರ ಆರ್ಥಿಕಾಭಿವ್ಪದ್ಧಿ ಗಾಗಿ ವಿವಿಧ ಯೋಜನೆಗಳಿಗೆ ಅನುದಾನ ಹಂಚಿಕೆ ಮಾಡುವಾಗ ೨೦೧೧ರ ಜನಗಣತಿಯನ್ನು ನೆಪವಾಗಿರಿಸಿಕೊಂಡು ಉಡುಪಿ ಜಿಲ್ಲೆಯನ್ನು ಸಂಪೂರ್ಣ ವಾಗಿ ಕಡೆಗಣಿಸಿ ಜಿಲ್ಲೆಯ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿದೆಂದು ಜಿಲ್ಲಾ ಮುಸ್ಲಿಂ ಒಕ್ಕೂಟದ ಮಾಜಿ ಅಧ್ಯಕ್ಷ ಎಂ.ಪಿ.ಮೊಯಿದಿನಬ್ಬ ಆರೋಪಿಸಿದ್ದಾರೆ.

ಇದನ್ನು ಕೂಡಲೇ ಸರಿಪಡಿಸಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸಂವಿಧಾನ ಬದ್ಧವಾಗಿ ದೊರಕಬೇಕಾದ ಸೌಲಭ್ಯವನ್ನು ದೊರಕಿಸಿಕೊಡುವಂತೆ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಗ್ರಹಿಸಿದ್ದಾರೆ.

೫ ವಿಧಾನಸಭಾ ಕ್ಷೇತ್ರಗಳನ್ನೂಳಗೊಂಡ ಉಡುಪಿ ಜಿಲ್ಲೆಗೆ ೨೦೨೨-೨೩ನೇ ಸಾಲಿಗೆ ಶ್ರಮ ಶಕ್ತಿ ಯೋಜನೆಗೆ ೧೮ ಮಂದಿಗೆ ತಲಾ ೫೦ ಸಾವಿರ ರೂ.ನಂತೆ ೯ಲಕ್ಷ, ಪ್ಯಾಸೆಂಜರ್ ಅಟೋ ಖರೀದಿಗೆ ೧೧ ಮಂದಿಗೆ ತಲಾ ೭೫ ಸಾವಿರ ರೂ.ನಂತೆ ೨೫ ಲಕ್ಷ, ಟ್ಯಾಕ್ಸಿ ಗೂಡ್ಸ್ ವಾಹನ ಖರೀದಿಗೆ ೭ ಮಂದಿಗೆ ತಲಾ ೨.೫೦ ಲಕ್ಷ ರೂ.ನಂತೆ ೧೭.೫೦ ಲಕ್ಷ, ಸ್ವ-ಉದ್ಯೋಗ ಕೈಗೊಳ್ಳಲು ೧೮ ಮಂದಿಗೆ ೧ಲಕ್ಷ ರೂ.ನಂತೆ ೧೮ಲಕ್ಷದ ಗುರಿ ನಿಗದಿಪಡಿಸಿ ನಿಗಮವು ಅರ್ಜಿಗಳನ್ನು ಆಹ್ವಾನಿಸಿದೆ. ಇದರಿಂದ ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ೩ ರಿಂದ ೪ ಮಂದಿ ಫಲಾನುಭವಿಗಳಿಗೆ ಮಾತ್ರ ಈ ಸೌಲಭ್ಯ ದೊರಕಲಿದೆ.

ಜಿಲ್ಲೆಯಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಬಹಳಷ್ಟು ಅಲ್ಪಸಂಖ್ಯಾತ ಕುಟುಂಬಗಳಿಗೆ ಈಗ ನಿಗಿದಿ ಮಾಡಿರುವ ಗುರಿಯಿಂದ ಭಾರೀ ತೊಂದರೆಯಾ ಗಲಿದೆ. ಇದನ್ನು ಕೂಡಲೇ ಸರಿಪಡಿಸಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೆ ಕನಿಷ್ಠ ೫೦ ಫಲಾನುಭವಿಗಳಿಗೆ ಅವಕಾಶ ಕಲ್ಪಿಸಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಬೇಕು ಎಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News