ಮರವಂತೆಯ ಕಡಲ ಕೊರೆತದ ಪ್ರದೇಶಕ್ಕೆ ಸಿಎಂ ಬೊಮ್ಮಾಯಿ ಭೇಟಿ

Update: 2022-07-13 16:38 GMT

ಮರವಂತೆ : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಇಂದು ಮರವಂತೆಯಲ್ಲಿ ತೀವ್ರವಾಗಿ ಕಡಲ ಕೊರೆತ ಕಂಡುಬಂದ ಕರಾವಳಿ ಭಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದರು. 

ಕಡಲಕೊರೆತ ತಡೆಗೆ ತುರ್ತು ಕಾಮಗಾರಿಗಳಿಗಾಗಿ ಹಣ ಬಿಡುಗಡೆ ಮಾಡುವಂತೆ ಅವರು ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಇಲ್ಲಿನ ಕಡಲ ಕೊರೆತವನ್ನು ನೋಡಿದ್ದೇನೆ. ಪ್ರತಿವರ್ಷ ಇಲ್ಲಿ ಕಡಲ ಕೊರೆತವಾಗುತ್ತಿದೆ. ಇದಕ್ಕೆ ಸದ್ಯ ತಾತ್ಕಾಲಿಕ ಕಾಮಗಾರಿಯನ್ನು ಶೀಘ್ರವೇ ಪ್ರಾರಂಭಿಸುವಂತೆ ತಿಳಿಸಿದ್ದೇನೆ ಎಂದರು.

ಕಡಲ ಕೊರೆತ ತಡೆಗೆ ಶಾಶ್ವತ ಕಾಮಗಾರಿ ನಡೆಸಲು ತಜ್ಞರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ತಾತ್ಕಾಲಿಕ ಕಾಮಗಾರಿಗೆ ಬೇಕಷ್ಟು ಅನುದಾನ  ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಕಳೆದ ಬಾರಿ ಆದ ಕಾಮಗಾರಿಯ ಬಗ್ಗೆ ತನಿಖೆ ನಡೆಸಲಾಗುವುದು. ಹಿಂದೆ ಕಲ್ಲುಗಳನ್ನು ಸರಿಯಾಗಿ ಹಾಕಲಾಗಿಲ್ಲ. ಕಾಮಗಾರಿಯಾದ ಕಡೆ ತನಿಖೆ ನಡೆಸಲಾಗುವುದು. ತಪ್ಪಿತಸ್ಥರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ನಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿ: ಸಂತ್ರಸ್ಥರ ಮನವಿ

ಪ್ರತಿ ವರ್ಷ ಮಳೆಗಾಲದಲ್ಲಿ ನಮಗೆ ಇದೊಂದು ಶಾಶ್ವತ ಸಮಸ್ಯೆಯಾಗಿ ಪರಿಣಮಿಸಿದೆ. ಇದಕ್ಕೊಂದು ಶಾಶ್ವತ ಪರಿಹಾರ ನೀಡುವಂತೆ ಎಲ್ಲರಿಗೂ ಮನವಿ ಮಾಡಿದರೂ ಯಾವುದೇ ಸಮಸ್ಯೆ ಬಗೆಹರಿದಿಲ್ಲ. ಪ್ರತಿ ವರ್ಷ ಇದು ಉಗ್ರರೂಪದಲ್ಲಿ ಪುನರಾವರ್ತಿತವಾಗುತ್ತಿದೆ. ಹೀಗೆಂದು ತಮ್ಮ ದು:ಖ ದುಮ್ಮಾನಗಳನ್ನು ಮುಖ್ಯಮಂತ್ರಿ ಹಾಗೂ ಅಧಿಕಾರಿಗಳ ಮುಂದೆ ತೆರೆದಿಟ್ಟವರು ಮರವಂತೆ ಕರಾವಳಿ ಭಾಗದ 50 ಕ್ಕೂ ಅಧಿಕ ಮಂದಿ ಮಹಿಳೆಯರು.

ಇಲ್ಲಿ ಮಳೆಗಾಲದ ಮೂರ್ನಾಲ್ಕು ತಿಂಗಳು ಇವರಿಗೆ ಪ್ರತಿದಿನ ಆತಂಕವನ್ನು ಉಂಟು ಮಾಡುತ್ತವೆ. ಕಡಲಕಿನಾರೆಗೆ ಸಮೀಪದಲ್ಲಿರುವ ಸುಮಾರು 500ರಷ್ಟು ಮನೆಯವರಿಗೆ ಇದು ನಿತ್ಯದ ಗೋಳಾಗಿದೆ. ಈಗಾಗಲೇ ಕಳೆದ ವರ್ಷ 200ರಿಂದ 300ರಷ್ಟು ತೆಂಗಿನ ಮರಗಳು ಸಮುದ್ರದ ಮಡಿಲು ಸೇರಿವೆ. ಈ ಬಾರಿ ಈಗಾಗಲೇ 100ರಿಂದ 150ರಷ್ಟು ಮರಗಳು ಕಡಲಿಗೆ ಆಹುತಿಯಾಗಿವೆ ಎಂದು ತಮ್ಮ ಸಂಕಷ್ಟ ತೋಡಿಕೊಂಡವರು ಸುಧಾಕರ ಆಚಾರ್ಯ.

ಇಂದು ಇಲ್ಲಿ ನಮ್ಮ ಕಣ್ಣೆದುರೇ ೩-೪ ತೆಂಗಿನ ಮರಗಳು ಕಡಲಕೊರೆತಕ್ಕೆ ಧರಾಶಾಹಿಯಾದವು. ಇವುಗಳಿಗೆ ಪರಿಹಾರ ನೀಡುವವರು ಯಾರೂ ಇಲ್ಲ. ಪ್ರತಿವರ್ಷ ಮಳೆಗಾಲದಲ್ಲಿ ಉಗ್ರರೂಪ ತಾಳಿ ಭೂಮಿಯನ್ನು ಕಬಳಿಸುವ ಈ ಕಡಲು ಕೊರೆತಕ್ಕೆ ಶಾಶ್ವತ ಪರಿಹಾರ ತೋರಿಸಿ ಎಂಬುದು ಯಾರ ಕಿವಿಗೂ ಕೇಳಿಸುತ್ತಿಲ್ಲ ಎಂದು ಗ್ರಾಪಂ ಸದಸ್ಯರಾದ ಜ್ಯೋತಿ ಶೆಟ್ಟಿ ಹಾಗೂ ಸುಶೀಲಮ್ಮ ಹೇಳಿದರು.

ಈಗ ನೋಡಿ ಕಡಲು, ರಸ್ತೆಯವರೆಗೆ ಮುನ್ನುಗ್ಗಿ ಬಂದಿದೆ. ರಸ್ತೆ ದಾಟಿದರೆ ಇರುವುದೇ ನಮ್ಮ ಮನೆಗಳು. ರಾತ್ರಿ ವೇಳೆ ತೆರೆಗಳ ಉಗ್ರರೂಪಕ್ಕೆ ನಮಗೆ ನಿದ್ರೆಯೇ ಬರುವುದಿಲ್ಲ. ನಮಗೆಲ್ಲಾ ಇರುವುದು ಈ ಮನೆಗಳು ಮಾತ್ರ. ಇದನ್ನು ಬಿಟ್ಟು ಎಲ್ಲಿಗೆ ಹೋಗುವುದು ಎಂಬುದು 50ಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ಮಹಿಳೆಯರ ಅಳಲು.

ಇಂದು ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಮ್ಮ ಅಳಲನ್ನು ಹೇಳಿದ್ದೇವೆ. ಖಂಡಿತ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ. ನೋಡಬೇಕು ಏನಾಗುತ್ತದೆ ಎಂದು ಗ್ರಾಪಂ ಸದಸ್ಯೆ ಸುಜಾತ ನುಡಿದರು. ಬೇಸಿಗೆಯಲ್ಲಿ ನಮಗೆ ಕುಡಿಯುವ ನೀರಿನ ಸಮಸ್ಯೆಯೂ ಇದೆ ಎಂದು ಅವರು ಗಮನ ಸೆಳೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News