ಧನಾತ್ಮಕ ವ್ಯಕ್ತಿತ್ವ ರೂಪಿಸಲು ಶಿಕ್ಷಣ ಅನಿವಾರ್ಯ: ಜಲೀಲ್ ಸಾಹೇಬ್

Update: 2022-07-14 15:29 GMT

ಉಡುಪಿ,ಜು.14: ನಮ್ಮ ವ್ಯಕ್ತಿತ್ವ ಧನಾತ್ಮಕವಾಗಿ ರೂಪುಗೊಳ್ಳಲು ನಾವು ಅಗತ್ಯದ ಶಿಕ್ಷಣವನ್ನು ಪಡೆದು ಕೊಳ್ಳಬೇಕಾಗಿದೆ. ಇಲ್ಲವಾದಲ್ಲಿ ನಾವು ಆಧುನಿಕ ಸಮಾಜದಲ್ಲಿ ಕೊನೆಯ ಸ್ಥರದಲ್ಲಿ ಜೀವಿಸಬೇಕಾಗುತ್ತದೆ. ಹಾಗಾಗಿ ಹೆತ್ತವರು ಆರ್ಥಿಕವಾಗಿ ದುರ್ಬಲವಾಗಿದ್ದರೂ ಕೂಡಾ ಮಕ್ಕಳ ಶಿಕ್ಷಣವನ್ನು ನಿರಾಕರಿಸದೇ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಕಾರಣಕರ್ತರಾಗ ಬೇಕು ಎಂದು ಉದ್ಯಾವರ ಎಚ್.ಎಸ್. ಅಡಿಟೋರಿಯಂ ಟ್ರಸ್ಟ್ನ ಆಡಳಿತ ವಿಶ್ವಸ್ಥ ಅಬ್ದುಲ್ ಜಲೀಲ್ ಸಾಹೇಬ್ ಹೇಳಿದ್ದಾರೆ.

ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ 2022- 2023 ಸಾಲಿನ ವಿದ್ಯಾರ್ಥಿ ಕೈಪಿಡಿ ಬಿಡುಗಡೆ ಮಾಡಿ ಅವರು ಮಾತನಾಡುತಿದ್ದರು. ಇಂದು ಸಮಾಜ ಮುಂದುವರಿದಿದೆ. ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸಬೇಕೆಂಬ ಇರಾದೆಯ ಹೆತ್ತವರು ಆರ್ಥಿಕವಾಗಿ ದುರ್ಬಲರಾಗಿದ್ದರೂ ಕೂಡಾ ನೆರವುಗಳು ಸಿಗುತ್ತದೆ. ಸಿಕ್ಕ ನೆರವುಗಳನ್ನು ಘನತೆಯಿಂದ ಉಪಯೋಗಿಸಿ ಕೊಂಡು ಬದುಕಲ್ಲಿ ಯಶಸ್ವೀಯಾಗಬಹುದು ಎಂದರು.

ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಗಣಪತಿ ಕಾರಂತ್ ವಹಿಸಿದ್ದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಡಾ.ತ್ರಿವೇಣಿ ವೇಣುಗೋಪಾಲ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಣೇಶ್ ಕುಮಾರ್, ಶಾಲಾಡಳಿತ ಮಂಡಳಿ ಸದಸ್ಯ ಪ್ರತಾಪ್ ಕುಮಾರ್ ಉಪಸ್ಥಿತರಿದ್ದರು. ಶಾಲಾ ಸಂಚಾಲಕ ಸುರೇಶ್ ಶೆಣೈ ಸ್ವಾಗತಿಸಿದರು. ನಿಕಟ ಪೂರ್ವ ಸಂಚಾಲಕ ಉದ್ಯಾವರ ನಾಗೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಅನುರಾಧ ಪ್ರವೀಣ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ನಂತರ ಬಕ್ರೀದ್ ಹಬ್ಬದ ಅಂಗವಾಗಿ ಅಬ್ದುಲ್ ಜಲೀಲ್ ಸಾಹೇಬರ ಪ್ರಾಯೋಜಕತ್ವದಲ್ಲಿ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News