ಬ್ರಿಟನ್ ಪ್ರಧಾನಿ ಹುದ್ದೆ ರೇಸ್: 2ನೇ ಸುತ್ತಿನಲ್ಲೂ ರಿಷಿ ಸುನಾಕ್ ಮುನ್ನಡೆ

Update: 2022-07-15 03:02 GMT
ರಿಷಿ ಸುನಾಕ್ (Photo: AP/PTI)

ಲಂಡನ್: ಬ್ರಿಟನ್ ಪ್ರಧಾನಿ ಹುದ್ದೆಗೆ ನಡೆದಿರುವ ಪೈಪೋಟಿ ಇದೀಗ ಕುತೂಹಲಕರ ಘಟ್ಟ ತಲುಪಿದ್ದು, ಕನ್ಸರ್ವೇಟಿವ್ ಪಕ್ಷದ ಸಂಸದರ ಎರಡನೇ ಸುತ್ತಿನ ಮತದನದಲ್ಲೂ ಭಾರತ ಮೂಲದ ರಿಷಿ ಸುನಾಕ್ ಮುನ್ನಡೆ ಸಾಧಿಸಿದ್ದಾರೆ. ಸುನಾಕ್ 101 ಮತಗಳನ್ನು ಗಳಿಸಿದರೆ, ಭಾರತ ಮೂಲದ ಮತ್ತೊಬ್ಬ ಸ್ಪರ್ಧಿ ಅಟಾರ್ನಿ ಜನರಲ್ ಸ್ಯುಯೆಲ್ಲಾ ಬ್ರವರ್ಮನ್ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ.

ವ್ಯಾಪಾರ ವ್ಯವಹಾರಗಳ ಖಾತೆ ಸಚಿವ ಪೆನ್ನಿ ಮಾರ್ಡಂಟ್ 83 ಮತಗಳೊಂದಿಗೆ ಎರಡನೇಯವರಾಗಿ ಸ್ಪರ್ಧೆ ಮುಗಿಸಿದರೆ, ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ 64 ಮತಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ. ಮಾಜಿ ಷೇರು ಸಚಿವ ಕೆಮಿ ಬಡೇನಾಚ್ 49, ವಿದೇಶಾಂಗ ವ್ಯವಹಾರಗಳ ಸಮಿತಿ ಅಧ್ಯಕ್ಷ ಟಾಮ್ ಟುಗೆಂದತ್ 32 ಮತಗಳನ್ನು ಗಳಿಸಿ ನಾಲ್ಕು ಹಾಗೂ ಐದನೇ ಸ್ಥಾನ ಹಂಚಿಕೊಂಡರು. ಸೋಮವಾರ ನಡೆಯುವ ಮೂರನೇ ಸುತ್ತಿನ ಮತದಾನಕ್ಕೆ ಈ ಐವರು ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.

ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿಯವರ ಅಳಿಯ ಆಗಿರುವ ಸುನಾಕ್ ಮೊದಲ ಸುತ್ತಿನಲ್ಲಿ 88 ಮತಗಳನ್ನು ಪಡೆದು ಅಗ್ರಸ್ಥಾನದಲ್ಲಿದ್ದರು. ಎರಡನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡು ಅಂತಿಮ ಸುತ್ತಿಗೆ ಆಯ್ಕೆಯಾಗುವ ಎಲ್ಲ ಸಾಧ್ಯತೆ ಇದೆ. ಪಕ್ಷದ ಸದಸ್ಯರ ಕೊನೆಯ ಹಂತದ ಮತದಾನ ನಿರ್ಣಾಯಕವಾಗಲಿದ್ದು, ಮುಂದಿನ ಬ್ರಿಟನ್ ಪ್ರಧಾನಿ ಹುದ್ದೆಗೆ ಕನ್ಸರ್ವೇಟಿವ್ ಪಕ್ಷದ ಅಭ್ಯರ್ಥಿ ಯಾರು ಎನ್ನುವುದನ್ನು ನಿರ್ಧರಿಸಲಿದೆ. ಈ ಸುತ್ತಿನಲ್ಲಿ ಮಾರ್ಡೆಂಟ್ ಸುನಕ್ ಅವರನ್ನು ಹಿಂದಿಕ್ಕಲಿದ್ದಾರೆ ಎಂಬ ನಿರೀಕ್ಷೆಯಿದ್ದು, ಮಾರ್ಡೆಂಟ್ ಬ್ರಿಟನ್‍ನ ಮುಂದಿನ ಪ್ರಧಾನಿಯಾಗಲಿದ್ದಾರೆ ಎನ್ನುವುದು ಬುಕ್ಕಿಗಳ ವಿಶ್ಲೇಷಣೆ.

ಬ್ರಿಟನ್ ದೇಶವನ್ನು ಯೂರೋಪಿಯನ್ ಮಾನವ ಹಕ್ಕುಗಳ ನ್ಯಾಯಾಲಯದಿಂದ ಹೊರಕ್ಕೆ ತರುವ ಪಣ ತೊಟ್ಟಿದ್ದ ಬ್ರೆವರ್‍ಮನ್ 27 ಮತಗಳನ್ನು ಪಡೆದು ಕೊನೆಯವಾಗಿ ಸ್ಪರ್ಧೆ ಮುಗಿಸಿ, ಮುಂದಿನ ಸುತ್ತಿಗೆ ಅರ್ಹತೆ ಪಡೆಯಲಿಲ್ಲ. ಇವರ ತಂದೆ ನೈರೋಬಿ ಮೂಲದವರಾಗಿದ್ದು, ತಾಯಿ ಮರೀಷಿಯಸ್‍ನಲ್ಲಿ ಜನಿಸಿದ ತಮಿಳು ಮೂಲದವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News