ಬೆಳ್ತಂಗಡಿ | ಮಲವಂತಿಗೆ ಗ್ರಾಮದ ಬಲ್ಲರಾಯನದುರ್ಗ ಕೆಳಭಾಗದಲ್ಲಿ ಸ್ಫೋಟದ ಸದ್ದು: ಭೂಕುಸಿತದ ಭೀತಿ
ಬೆಳ್ತಂಗಡಿ, ಜು.15: ತಾಲೂಕಿನ ಮಲವಂತಿಗೆ ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಂಚಿನಲ್ಲಿರುವ ಬಲ್ಲರಾಯನದುರ್ಗದ ಕೆಳಭಾಗದಿಂದ ಭಾರೀ ಸ್ಫೋಟದ ಸದ್ದಿನೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿರುವ ಕುರಿತು ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಭಾಗದಲ್ಲಿ ಮಕ್ಕಿ, ಪರ್ಲ, ದೈಪಿತ್ತಿಲು, ಎಲ್ಯರಕಂಡ ಸಹಿತ ಸುತ್ತಮುತ್ತ 16ಕ್ಕೂ ಅಧಿಕ ಮನೆಗಳಿವೆ. ಕಳೆದ ವರ್ಷ ಆಗಸ್ಟ್ ಅವಧಿಯಲ್ಲಿ ಈ ಪ್ರದೇಶದಲ್ಲಿ ಭಾರಿ ಭೂ ಕುಸಿತ ಉಂಟಾದ ಹಿನ್ನೆಲೆ ಇಲ್ಲಿನ 40ಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರಿಸಿ ಬೇರೆಡೆ ಆಶ್ರಯ ನೀಡಲಾಗಿತ್ತು.
ಜು.14 ರಂದು ರಾತ್ರಿ ವೇಳೆಗೆ ಭಾರೀ ಸದ್ದಿನೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಇಂದು ಇದೇ ಪ್ರದೇಶದಲ್ಲಿ ಹಾದು ಬರುವ ಏಳುವರೆ ಹಳ್ಳದಲ್ಲಿ ಮಣ್ಣು ಮಿಶ್ರಿತ ನೀರು ಬರುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಈ ಹಿಂದೆಯೂ ಇಲ್ಲಿ ಇದೇ ರೀತಿ ಕುಸಿತದ ಶಬ್ದಗಳು ಕೇಳಿಸಿದ ಅನುಭವವಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಈ ಪರಿಸರದಲ್ಲಿ ಭಾರಿ ಮಳೆಯಾಗುತ್ತಿದ್ದು, ಅಲ್ಲಲ್ಲಿ ಭೂ ಕುಸಿತ ಉಂಟಾಗುತ್ತಿದೆ. ಇದೀಗ ಮಲವಂತಿಗೆ ಸಮೀಪ ಬಲ್ಲರಾಯನದುರ್ಗದ ಭಾಗದಲ್ಲಿ ಭೂಕುಸಿತ ಉಂಟಾಗಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.