ಲಕ್ನೋದ ನೂತನ ಲುಲು ಮಾಲ್‍ನಲ್ಲಿ ನಮಾಝ್ ವೀಡಿಯೋ ವೈರಲ್: ಪೊಲೀಸರಿಂದ ಪ್ರಕರಣ ದಾಖಲು

Update: 2022-07-15 12:44 GMT

ಲಕ್ನೋ: ನಗರದಲ್ಲಿ ಹೊಸದಾಗಿ ಆರಂಭಗೊಂಡಿರುವ ಲುಲು ಮಾಲ್‍ನಲ್ಲಿ ಜುಲೈ 12 ರಂದು ನಮಾಝ್ ಸಲ್ಲಿಸಿದ್ದಾರೆಂದು ಆರೋಪಿಸಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಲಕ್ನೋ ಪೊಲೀಸರು ಗುರುವಾರ ಪ್ರಕರಣ ದಾಖಲಿಸಿದ್ದಾರೆ.

ಮಾಲ್‍ನಲ್ಲಿ ಕೆಲ ಮಂದಿ ನಮಾಝ್ ಸಲ್ಲಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮಾಲ್‍ನ ಸಾರ್ವಜನಿಕ ಸಂಪರ್ಕ ಮ್ಯಾನೇಜರ್ ಸ್ವಿಬ್‌ತೈನ್ ಹುಸೇನ್ ಎಂಬವರು  ಸುಶಾಂತ್ ಗೋಲ್ಫ್ ಸಿಟಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರನ್ವಯ ಪೊಲೀಸರು ಸೆಕ್ಷನ್ 153ಎ(1), 295(ಎ), 341 ಹಾಗೂ 505 ಅನ್ವಯ ಪ್ರಕರಣ ದಾಖಲಿಸಿದ್ದರು.

ರವಿವಾರವಷ್ಟೇ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಈ ಮಾಲ್ ಉದ್ಘಾಟಿಸಿದ್ದರು. ಭಾರತೀಯ ಮೂಲದ ಉದ್ಯಮಿ, ಅಬುಧಾಬಿಯ ಲುಲು ಗ್ರೂಪ್ ಸ್ಥಾಪಕ ಯೂಸುಫ್ ಆಲಿ ಎಂ.ಎ ಈ ಮಾಲ್ ಮಾಲೀಕರಾಗಿದ್ದಾರೆ.

ಮಾಲ್‍ನಲ್ಲಿ ನಮಾಝ್ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಅಖಿಲ ಭಾರತೀಯ ಹಿಂದು ಮಹಾಸಭಾದ ಸದಸ್ಯರು ಮಾಲ್ ಗೇಟ್ ಹೊರಗಡೆ ಪ್ರತಿಭಟನೆ ನಡೆಸಿದ್ದರಲ್ಲದೆ ಶುಕ್ರವಾರ ಮಾಲ್ ಸಮೀಪ ತಮಗೆ ಹನುಮಾನ್ ಚಾಲೀಸ ಪಠಿಸಲು ಅವಕಾಶ ನೀಡಬೇಕೆಂದು ಆಗ್ರಹಿಸಿದ್ದರು.

"ಒಂದು ನಿರ್ದಿಷ್ಟ ಸಮುದಾಯದ ಮಂದಿಗೆ ಮಾಲ್ ಒಳಗೆ ನಮಾಝ್ ಗೆ ಅವಕಾಶ ನಿಡಲಾಗುತ್ತಿದೆ, ಹಿಂದುಗಳಿಗೆ ಮತ್ತು ಇತರ ಸಮುದಾಯದವರಿಗೂ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಬೇಕು" ಎಂದು  ಸಭಾದ ರಾಷ್ಟ್ರೀಯ ವಕ್ತಾರ ಶಿಶಿರ್ ಚತುರ್ವೇದಿ ಹೇಳಿದ್ದರು. ತಮಗೆ ಹಾಗೂ ತಮ್ಮ ಸಂಘಟನೆಯ ಇತರ ಸದಸ್ಯರಿಗೆ ಮಾಲ್ ಪ್ರವೇಶಿಸಲು ಅನುಮತಿಯನ್ನು ನೀಡಿಲ್ಲ ಎಂದೂ ಅವರು ಆರೋಪಿಸಿದ್ದರು.

"ತಮ್ಮ ಸಂಸ್ಥೆ ಎಲ್ಲಾ ಧರ್ಮಗಳನ್ನೂ ಗೌರವಿಸುತ್ತದೆ, ಇಲ್ಲಿ ಯಾರಿಗೂ  ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿಲ್ಲ. ಇಂತಹ ಚಟುವಟಿಕೆ ಮೇಲೆ ನಿಗಾ ಇಡಲು ನಮ್ಮ ಸಿಬ್ಬಂದಿಗೆ ನಾವು ತರಬೇತಿ ನೀಡುತ್ತೇವೆ" ಎಂದು ಮಾಲ್‍ನ ಜನರಲ್ ಮ್ಯಾನೇಜರ್ ಸಮೀರ್ ವರ್ಮ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News