ಉದ್ಧವ್‌ ಠಾಕ್ರೆಯವರ ಔರಂಗಾಬಾದ್‌ ಮರುನಾಮಕರಣ ನಿರ್ಧಾರ ಕಾನೂನು ಬಾಹಿರವಾಗಿತ್ತು: ಏಕನಾಥ್‌ ಶಿಂಧೆ

Update: 2022-07-15 14:19 GMT

ಮುಂಬೈ: ಔರಂಗಾಬಾದ್ ಹೆಸರನ್ನು ಮರುನಾಮಕರಣ ಮಾಡುವ ಕುರಿತು ಉದ್ಧವ್‌ ಠಾಕ್ರೆ ನೇತೃತ್ವದ ಹಿಂದಿನ ಮಹಾ ವಿಕಾಸ್ ಅಘಾಡಿ ಸರ್ಕಾರದ ನಿರ್ಧಾರವು ಕಾನೂನುಬಾಹಿರವಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಶುಕ್ರವಾರ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಈ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸಲಾಗುವುದು ಮತ್ತು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮತ್ತೊಮ್ಮೆ ಅನುಮೋದನೆ ನೀಡಲಾಗುವುದು ಎಂದು ಶಿಂಧೆ ಹೇಳಿದರು.

ಜೂನ್ 29 ರಂದು ಮಹಾ ವಿಕಾಸ್ ಅಘಾಡಿ ಸರ್ಕಾರದ ಕೊನೆಯ ಕ್ಯಾಬಿನೆಟ್ ಸಭೆಯಲ್ಲಿ, ಉದ್ಧವ್ ಠಾಕ್ರೆ ಆಡಳಿತವು ಔರಂಗಾಬಾದ್ ಮತ್ತು ಉಸ್ಮಾನಾಬಾದ್ ನಗರಗಳನ್ನು ಸಂಭಾಜಿ ನಗರ ಮತ್ತು ಧಾರಾಶಿವ್ ಎಂದು ಮರುನಾಮಕರಣ ಮಾಡಿತ್ತು.

ಔರಂಗಾಬಾದ್ ಗೆ ಮೊಘಲ್ ಚಕ್ರವರ್ತಿ ಔರಂಗಜೇಬ್‌ ರ ಹೆಸರನ್ನು ಇಡಲಾಗಿದೆ. ಮರಾಠಾ ಸಾಮ್ರಾಜ್ಯದ ಸಂಸ್ಥಾಪಕ ಶಿವಾಜಿಯ ಹಿರಿಯ ಮಗನಾದ 17 ನೇ ಶತಮಾನದ ಆಡಳಿತಗಾರ ಸಂಭಾಜಿ ಹೆಸರನ್ನು ಈಗ ನಾಮಕರಣ ಮಾಡಲಾಗಿದೆ. ಔರಂಗಾಬಾದ್ ಅನ್ನು ಮರುನಾಮಕರಣ ಮಾಡುವ ವಿಚಾರ ಶಿವಸೇನೆಯ ರಾಜಕೀಯ ಕಾರ್ಯಸೂಚಿಯಲ್ಲಿ ಬಹಳ ಹಿಂದಿನಿಂದಲೂ ಇತ್ತು, ಪಕ್ಷದ ಸಂಸ್ಥಾಪಕ ಬಾಳ್ ಠಾಕ್ರೆ ಅವರು 1988 ರಲ್ಲಿ ಮೊದಲ ಬೇಡಿಕೆಯನ್ನು ಎತ್ತಿದ್ದರು.

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮೊದಲು ಉದ್ಧವ್ ಠಾಕ್ರೆ ಅವರು ತೆಗೆದುಕೊಂಡ ಕೊನೆಯ ನಿರ್ಧಾರಗಳಲ್ಲಿ ಮರುನಾಮಕರಣವೂ ಒಂದು. ಶಿಂಧೆ ನೇತೃತ್ವದ ಶಿವಸೇನೆಯ 40 ಶಾಸಕರು ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಭಾರತೀಯ ಜನತಾ ಪಕ್ಷದೊಂದಿಗೆ ಕೈಜೋಡಿಸಿದ ನಂತರ ಶಿವಸೇನೆಯಲ್ಲಿನ ವಿಭಜನೆಯಿಂದಾಗಿ ಅವರು ಅಧಿಕಾರದಿಂದ ಕೆಳಗಿಳಿಯಬೇಕಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News