​ರಶ್ಯದಿಂದ ಕ್ಷಿಪಣಿ ಖರೀದಿ ನಿರ್ಬಂಧದಿಂದ ಭಾರತಕ್ಕೆ ವಿನಾಯಿತಿ ತಿದ್ದುಪಡಿ ಮಸೂದೆಗೆ ಅಮೆರಿಕ ಅಂಗೀಕಾರ

Update: 2022-07-15 17:30 GMT

 
ವಾಷಿಂಗ್ಟನ್, ಜು.16: ರಶ್ಯದಿಂದ ಎಸ್-400 ಕ್ಷಿಪಣಿ ವ್ಯವಸ್ಥೆ ಖರೀದಿಸುವ ಒಪ್ಪಂದಕ್ಕೆ ಅಮೆರಿಕದ ಕಾಟ್ಸಾ ಕಾಯ್ದೆಯಿಂದ ವಿನಾಯಿತಿ ಒದಗಿಸುವ ತಿದ್ದುಪಡಿ ಮಸೂದೆಯನ್ನು ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಗುರುವಾರ ಧ್ವನಿಮತದಿಂದ ಅಂಗೀಕರಿಸಿದೆ. ಚೀನಾದಂತಹ ದೇಶಗಳಿಂದ ಎದುರಾಗುವ ಬೆದರಿಕೆಯನ್ನು ಎದುರಿಸಲು ಈ ವ್ಯವಸ್ಥೆ ಭಾರತಕ್ಕೆ ಅಗತ್ಯವಿದೆ ಎಂದು ಸಂಸದರು ಅಭಿಪ್ರಾಯಪಟ್ಟು ತಿದ್ದುಪಡಿ ಮಸೂದೆಯನ್ನು ಬೆಂಬಲಿಸಿದರು ಎಂದು ಮಾಧ್ಯಮಗಳು ವರದಿ ಮಾಡಿವೆ.   

ಭಾರತೀಯ ಮೂಲದ ಅಮೆರಿಕನ್ ಸಂಸದ ರೊ ಖನ್ನಾ ಮಂಡಿಸಿದ ಮಸೂದೆಯಲ್ಲಿ, ಚೀನಾದಂತಹ ದೇಶಗಳಿಂದ ಎದುರಾಗಿರುವ ಬೆದರಿಕೆಯನ್ನು ಎದುರಿಸಲು ಭಾರತಕ್ಕೆ ಇಂತಹ ಶಸ್ತ್ರಾಸ್ತ್ರ ವ್ಯವಸ್ಥೆ ಅಗತ್ಯವಿರುವುದರಿಂದ ‘ಕೌಂಟರಿಂಗ್ ಅಮೆರಿಕಾ’ಸ್ ಅಡ್ವರ್ಸರೀಸ್ ಥ್ರೂ ಸ್ಯಾಂಕ್ಷನ್ಸ್ ಆ್ಯಕ್ಟ್’ ಕಾಟ್ಸಾದಿಂದ ಭಾರತಕ್ಕೆ ವಿನಾಯಿತಿ ನೀಡುವಂತೆ ಬೈಡನ್ ಆಡಳಿತವನ್ನು ಆಗ್ರಹಿಸಲಾಗಿದೆ.

 2014ರಲ್ಲಿ ಕ್ರಿಮಿಯಾದ ಮೇಲಿನ ಆಕ್ರಮಣ ಹಾಗೂ 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪದ ಆರೋಪದ ಹಿನ್ನೆಲೆಯಲ್ಲಿ ರಶ್ಯದ ವಿರುದ್ಧ ಕಠಿಣ ನಿರ್ಬಂಧವನ್ನು ಅಮೆರಿಕ ಜಾರಿಗೊಳಿಸಿದೆ. ಇದರಡಿ, ರಶ್ಯದಿಂದ ರಕ್ಷಣಾ ಸಾಮಾಗ್ರಿ ಮತ್ತು ಶಸ್ತ್ರಾಸ್ತ್ರಗಳನ್ನು ಖರೀದಿಸುವ ದೇಶಗಳಿಗೂ ನಿರ್ಬಂಧ ವಿಧಿಸಲು ಅವಕಾಶವಿದೆ. ಚೀನಾದಿಂದ ಆಕ್ರಮಣದ ಭೀತಿ ಹೆಚ್ಚಿರುವ ಈ ಸಮಯದಲ್ಲಿ ಅಮೆರಿಕವು ಭಾರತದ ಜತೆ ನಿಲ್ಲಬೇಕಿದೆ. 

ಆದ್ದರಿಂದ ಈ ತಿದ್ದುಪಡಿ ಮಸೂದೆ ಅತ್ಯಂತ ಮಹತ್ವದ್ದಾಗಿದೆ ಎಂದು ಖನ್ನಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News