​ಭದ್ರತಾ ಸಮಿತಿ ಸದಸ್ಯತ್ವ: ಭಾರತದ ಪ್ರಯತ್ನಕ್ಕೆ ಪಾಕ್ ತಡೆ

Update: 2022-07-15 17:31 GMT

ಇಸ್ಲಮಾಬಾದ್, ಜು.16: ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಕಾಯಂ ಸದಸ್ಯತ್ವ ಪಡೆಯುವ ಭಾರತದ ಪ್ರಯತ್ನಕ್ಕೆ ಪಾಕಿಸ್ತಾನ ಮತ್ತೊಮ್ಮೆ ತಡೆಯೊಡ್ಡಿದ್ದು, ಇದು ಭಾರತದ ವಿರುದ್ಧ ತನಗೆ ಸಿಕ್ಕಿರುವ ಪ್ರಮುಖ ರಾಜತಾಂತ್ರಿಕ ಗೆಲುವಾಗಿದೆ ಎಂದು ಹೇಳಿದೆ. ವಿಶ್ವಸಂಸ್ಥೆ ಭದ್ರತಾ ಸಮಿತಿ ಕಾಯಂ ಸದಸ್ಯತ್ವ ಪಡೆಯಲು ಅಗತ್ಯವಿರುವ ಕನಿಷ್ಟ ಬೆಂಬಲವನ್ನು ಕ್ರೋಢೀಕರಿಸಲು ಭಾರತ ವಿಫಲವಾಯಿತು.

 ಇದೇ ಸಂದರ್ಭ, ಸದಸ್ಯತ್ವದ ಮಾನದಂಡದ ವಿಷಯದಲ್ಲಿ ಇನ್ನಷ್ಟು ಚರ್ಚೆ ನಡೆಯಬೇಕೆಂಬ ಪಾಕಿಸ್ತಾನದ ಆಗ್ರಹವನ್ನು ಅಂಗೀಕರಿಸಲಾಯಿತು ಎಂದು ವರದಿಯಾಗಿದೆ. ವಿಶ್ವಸಂಸ್ಥೆ ಭದ್ರತಾ ಸಮಿತಿ ಕಾಯಂ ಸದಸ್ಯತ್ವದ ಅವಧಿಯನ್ನು ಒಂದು ನಿರ್ದಿಷ್ಟ ಅವಧಿಗೆ ಸೀಮಿತಗೊಳಿಸಬೇಕು ಮತ್ತು ಪ್ರತೀ 2 ಅಥವಾ 5 ವರ್ಷಕ್ಕೆ ಚುನಾವಣೆ ನಡೆಯಬೇಕು ಎಂದು ಪಾಕ್ ಆಗ್ರಹಿಸುತ್ತಿದೆ. 

ಭಾರತವು ವಿಶ್ವಸಂಸ್ಥೆಯ ನಿರ್ಣಯವನ್ನು ಉಲ್ಲಂಘಿಸಿದೆ ಎಂಬುದು ಪಾಕಿಸ್ತಾನದ ಆರೋಪವಾಗಿದೆ. ಭಾರತ ಮೂರನೇ ಎರಡರಷ್ಟು ಸದಸ್ಯರ ಬೆಂಬಲ ಪಡೆಯಲು ವಿಫಲವಾಗಿದೆ ಮತ್ತು ಅಮೆರಿಕದ ಬೆಂಬಲವನ್ನೂ ಕಳೆದುಕೊಂಡಿದೆ. ಜಾತ್ಯಾತೀತ ಮತ್ತು ಬಲಿಷ್ಟ ಅರ್ಥವ್ಯವಸ್ಥೆಯಿದೆ ಎಂದು ಹೇಳಿಕೊಳ್ಳುತ್ತಿರುವ ಭಾರತ ವಿಶ್ವಸಂಸ್ಥೆಯ ಭದ್ರತಾ ಸಮಿತಿ ಕಾಯಂ ಸದಸ್ಯತ್ವದ ಮಾನದಂಡವನ್ನು ಹೊಂದಿಲ್ಲ. 

ಕನಿಷ್ಟ 129 ಸದಸ್ಯರ ಬೆಂಬಲದ ಅಗತ್ಯವಿದ್ದು ಇದರ ಅರ್ಧದಷ್ಟು ಸದಸ್ಯರ ಬೆಂಬಲವನ್ನೂ ಪಡೆಯಲು ಭಾರತ ವಿಫಲವಾಗಿದೆ. ಪಾಕಿಸ್ತಾನದ ನಿಲುವಿಗೆ ಅರಬ್ ಲೀಗ್ ಮತ್ತು ಆಫ್ರಿಕಾ ಒಕ್ಕೂಟವೂ ಬೆಂಬಲ ಸೂಚಿಸಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News