ದೇಶದಲ್ಲಿ ಕಳೆದ ವಾರ ವಾಡಿಕೆಗಿಂತ ಶೇ.50ರಷ್ಟು ಅಧಿಕ ಮಳೆ

Update: 2022-07-16 01:52 GMT

ಪುಣೆ: ಕಳೆದ ವಾರ ದೇಶಾದ್ಯಂತ ವಾಡಿಕೆ ಮಳೆಗಿಂತ ಶೇಕಡ 50ರಷ್ಟು ಅಧಿಕ ಮಳೆಯಾಗಿದ್ದು, ಜುಲೈ 7 ರಿಂದ 13ರ ಅವಧಿ ಜೂನ್ ಒಂದರಿಂದ ಆರಂಭವಾದ ಪ್ರಸಕ್ತ ಮುಂಗಾರಿನ ಅತ್ಯಧಿಕ ಮಳೆಯ ವಾರ ಎನಿಸಿದೆ ಎಂದು timesofindia.com ವರದಿ ಮಾಡಿದೆ.

ಜೂನ್ 22ರಲ್ಲಿ ಕೊನೆಗೊಂಡ ವಾರ (45%) ಮತ್ತು ಜುಲೈ 6ರಂದು ಕೊನೆಗೊಂಡ ವಾರದಲ್ಲಿ ಕೂಡಾ ಶೇಕಡ 28ರಷ್ಟು ಅಧಿಕ ಮಳೆಯಾಗಿತ್ತು. ಆದರೆ ಕಳೆದ ವಾರ ದೇಶದಲ್ಲಿ ಸರಾಸರಿ 93.5 ಮಿಲಿಮೀಟರ್ ಮಳೆಯಾಗಿದೆ. ಕನಿಷ್ಠ 42 ಜಿಲ್ಲೆಗಳಲ್ಲಿ ಈ ಅವಧಿಯಲ್ಲಿ ಬೀಳುವ ವಾಡಿಕೆ ಮಳೆಯ ಶೇಕಡ 300ಕ್ಕಿಂತಲೂ ಅಧಿಕ ಮಳೆಯಾಗಿದೆ ಎಂದು ಹವಾಮಾನ ಇಲಾಖೆಯ ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ಕಳೆದ ಶುಕ್ರವಾರ ಕೆಲ ಮಳೆಮಾಪನ ಕೇಂದ್ರಗಳಲ್ಲಿ ಜುಲೈ 7ರಿಂದ ಒಂದು ವಾರದ ಅವಧಿಯಲ್ಲಿ ಬೀಳುವ ವಾಡಿಕೆ ಮಳೆಯ ಶೇಕಡ 1200ರಷ್ಟು ಅಧಿಕ ಮಳೆಯಾಗಿವೆ. ಇದು ಬಹುಶಃ ಹಲವು ವರ್ಷಗಳಲ್ಲಿ ಗರಿಷ್ಠ ದಾಖಲೆ ಎಂದು ರಾಷ್ಟ್ರೀಯ ಹವಾಮಾನ ಮುನ್ಸೂಚನೆ ಕೇಂದ್ರದ ವಿಜ್ಞಾನಿ ರಾಜೇಂದ್ರ ಜೇನಮನಿ ಹೇಳಿದ್ದಾರೆ.

ಮುಂಗಾರಿನ ಮೊದಲ ಆರು ವಾರಗಳಲ್ಲಿ ದೇಶಾದ್ಯಂತ ಶೇ. 24 ರಿಂದ 42ರವರೆಗೆ ಮಳೆ ಅಭಾವ ಕಂಡುಬಂದಿತ್ತು. ಏಕಾಏಕಿ ಮಳೆಯ ಪ್ರಮಾಣ ಅಧಿಕವಾಗಲು ಏನು ಕಾರಣ? ಮಡ್ಡೇನ್-ಜ್ಯೂಲಿಯನ್ ಆಸಿಲೇಶನ್ (ಎಂಜೆಓ) ಪ್ರಕ್ರಿಯೆ ಅಂದರೆ ಪೂರ್ವಾಭಿಮುಖವಾಗಿ ಚಲಿಸಿದ ಮೋಡ ನಾಡಿ ಇದಕ್ಕೆ ಪ್ರಮುಖ ಕೊಡುಗೆ ನೀಡಿದೆ. ಗಾಳಿ ಹಾಗೂ ಮಳೆ, ಮುಂಗಾರಿನಂಥ ಉಷ್ಣವಲಯದ ಹವಾಮಾನ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಹಾಗೂ ಇದು 30 ರಿಂದ 60 ದಿನಗಳಿಗೊಮ್ಮೆ ಮರುಕಳಿಸುತ್ತದೆ. ಎಂಜೆಓ ಜುಲೈ ಆರಂಭದಲ್ಲಿ ಅನುಕೂಲಕರ ಹಂತವನ್ನು ತಲುಪಿದ್ದು, ಭಾರತಕ್ಕೆ ಅಧಿಕ ಮಳೆ ತಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News