ಯುವತಿ ಮೇಲೆ ಪತಿ ಅತ್ಯಾಚಾರ; ಘಟನೆಯನ್ನು ಚಿತ್ರೀಕರಿಸಿದ ಪತ್ನಿ!
ಬಡೂನ್ (ಉತ್ತರಪ್ರದೇಶ): ಹದಿಹರೆಯದ ಯುವತಿ ಮೇಲೆ ಪತಿ ಅತ್ಯಾಚಾರ ನಡೆಸಿದ ಘಟನೆಯನ್ನು ಆರೋಪಿಯ ಪತ್ನಿಯೇ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಲೋಡ್ ಮಾಡಿದ ಸಂಬಂಧ ದಂಪತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಯುವತಿ ನೀಡಿದ ದೂರಿನ ಮೇರೆಗೆ ಎಫ್‍ಐಆರ್ ದಾಖಲಿಸಿ ಇಬ್ಬರನ್ನೂ ಬಂಧಿಸಲಾಗಿದೆ ಎಂದು ಫಯಾಜ್‍ಗಂಜ್ ಬೆಥಾ ಪೊಲೀಸ್ ಠಾಣೆಯ ಉಸ್ತುವಾರಿ ಚರಣ್ ಸಿಂಗ್ ರಾಣಾ ಹೇಳಿದ್ದಾರೆ.
ಅತ್ಯಾಚಾರ, ಪೋಕ್ಸೊ ಕಾಯ್ದೆ ಮತ್ತು ಐಟಿ ಕಾಯ್ದೆಯ ಸೆಕ್ಷನ್‍ಗಳಡಿ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಜುಲೈ 12ರಂದು ಸಂತ್ರಸ್ತೆ ಯುವತಿಯ ಗ್ರಾಮದವನೇ ಆದ ವ್ಯಕ್ತಿ ತನ್ನ ಮನೆಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾನೆ. ಈ ಘಟನೆಯನ್ನು ಮೊಬೈಲ್‍ನಲ್ಲಿ ಪತ್ನಿ ಚಿತ್ರೀಕರಿಸಿಕೊಂಡಿದ್ದಾಳೆ. ಈ ಘಟನೆ ಬಗ್ಗೆ ಯಾರಿಗಾದರೂ ಹೇಳಿದರೆ, ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಯುವತಿ ದೂರಿನಲ್ಲಿ ವಿವರಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಯ ಪತ್ನಿ, ವಿಡಿಯೊವನ್ನು ಅಪ್‍ಲೋಡ್ ಮಾಡಿದ ಬಳಿಕ ಯುವತಿಯ ಕುಟುಂಬದವರಿಗೆ ಘಟನೆ ತಿಳಿಯಿತು ಎನ್ನಲಾಗಿದೆ. ಆ ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ndtv.com ವರದಿ ಮಾಡಿದೆ.