ಸೌದಿ ಯುವರಾಜನೊಂದಿಗೆ ಜೋ ಬೈಡನ್ ಮುಷ್ಟಿ ಲಾಘವ: ಸಂಬಂಧ ಪುನಾರಂಭ ನಿರೀಕ್ಷೆ

Update: 2022-07-17 18:37 GMT

ರಿಯಾದ್ (ಸೌದಿ ಅರೇಬಿಯಾ): ಶ್ರೀಮಂತ ಗಲ್ಫ್ ಸಾಮ್ರಾಜ್ಯದ ಜತೆಗಿನ ಸಂಬಂಧವನ್ನು ಪುನರಾರಂಭಿಸುವ ಸಂಕೇತವಾಗಿ, ಸೌದಿ‌ ಅರೇಬಿಯಾಗೆ ಭೇಟಿ ನೀಡಿರುವ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಸೌದಿ ಯುವರಾಜ ಮೊಹ್ಮದ್ ಬಿನ್ ಸಲ್ಮಾನ್ ಅವರಿಗೆ ಮುಷ್ಟಿಲಾಘವ ನೀಡುತ್ತಿರುವ ದೃಶ್ಯವನ್ನು ಸೌದಿ ಸರ್ಕಾರಿ ಟೆಲಿವಿಷನ್ ಪ್ರಸಾರ ಮಾಡಿದೆ. ಇದು ಉಭಯ ದೇಶಗಳ ನಡುವೆ ಹದಗೆಟ್ಟಿರುವ ಸಂಬಂಧ ಪುನರಾರಂಭದ ಸಂಕೇತವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ವಾಷಿಂಗ್ಟನ್ ಪೋಸ್ಟ್ ಪತ್ರಕರ್ತ ಮತ್ತು ರಾಜಕೀಯ ಎದುರಾಳಿ ಜಮಾಲ್ ಖಶೋಗಿ ಹತ್ಯೆಯಲ್ಲಿ ಮುಹಮ್ಮದ್ ಬಿನ್ ಸಲ್ಮಾನ್ ಅವರ ಪಾತ್ರವನ್ನು ಬೈಡನ್ ಟೀಕಿಸಿದ್ದ ಹಿನ್ನೆಲೆಯಲ್ಲಿ ಉಭಯ ಮುಖಂಡರ ಭೇಟಿ ಹಾಗೂ ಮಾತುಕತೆಗೆ ಶ್ವೇತಭವನದ ಅಧಿಕಾರಿಗಳು ಕಠಿಣ ಪರಿಶ್ರಮ ವಹಿಸಿದ್ದರು ಎಂದು hindustantimes.com ವರದಿ ಮಾಡಿದೆ.

ಮಾತುಕತೆಯ ಕೊನೆಗೆ ಜಿದ್ದಾದಲ್ಲಿರುವ ಅರಮನೆಯ ಎದುರಲ್ಲಿ ಉಭಯ ಮುಖಂಡರು ಪರಸ್ಪರ ಮುಷ್ಟಿಲಾಘವ ನೀಡಿದ ಘಟನೆ, ಹಿಂದೆ ಸೌದಿ ಅರೇಬಿಯಾವನ್ನು ಅಸ್ಪೃಶ್ಯ ದೇಶ ಎಂದು ಕರೆದಿದ್ದ ಅಮೆರಿಕ ಅಧ್ಯಕ್ಷರ ಭೇಟಿಯ ಒಟ್ಟಾರೆ ಚಿತ್ರಣವನ್ನು ವ್ಯಾಖ್ಯಾನಿಸುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಉಭಯ ಮುಖಂಡ ನಡುವಿನ ಮಾತಕತೆಯನ್ನು ಪರಸ್ಪರ ದೇಶಗಳ ನಡುವಿನ ಸಂಬಂಧಕ್ಕೆ ಇರುವ ತಡೆಯನ್ನು ಬದಿಗೊತ್ತುವ ಘಟನೆ ಎಂದು ಹೇಳಲಾಗುತ್ತಿದೆ. ಆರಂಭದಲ್ಲಿ ಅಮೆರಿಕ ಮಾಧ್ಯಮ ಪ್ರತಿನಿಧಿಗಳಿಗೆ ಮಾತುಕತೆಯ ವೇಳೆ ಅವಕಾಶ ನೀಡಲಾಗಿತ್ತಾದರೂ, ನೇರ ಪ್ರಸಾರಕ್ಕೆ ಅನುಮತಿ ನೀಡಿರಲಿಲ್ಲ. ಕೇವಲ ಉಭಯ ಮುಖಂಡರ ಮಾತು ಆಲಿಸಲು ಮಾತ್ರ ಅವಕಾಶ ಕಲ್ಪಿಸಲಾಗಿತ್ತು.

ಅಮೆರಿಕ ಹಾಗೂ ಸೌದಿ ನಿಯೋಗಗಳ ಪ್ರತಿನಿಧಿಗಳು ಕುಳಿತಿದ್ದ ಮೇಜಿನ ಬಳಿ ಇದ್ದ ಮೈಕ್ರೋಫೋನ್‍ಗಳನ್ನು ಆಫ್ ಮಾಡಿದ್ದರಿಂದ ಉಭಯ ಮುಖಂಡರ ಆರಂಭಿಕ ಶುಭಾಶಯ ವಿನಿಮಯದ ಬಗ್ಗೆ ಏನೂ ಕೇಳಿಸುತ್ತಿರಲಿಲ್ಲ.
ಸೌದಿ ಅರೇಬಿಯಾ ಖಶೋಗಿ ಕುಟುಂಬದ ಕ್ಷಮೆ ಯಾಚಿಸಿದೆಯೇ ಅಥವಾ ಸೌದಿ ಅರೇಬಿಯಾ ಇನ್ನೂ ಬೈಡನ್ ಪಾಲಿಗೆ ಅಸ್ಪೃಶ್ಯವಾಗಿ ಉಳಿದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ಉಭಯ ಗಣ್ಯರು ನಿರಾಕರಿಸಿದರು.

ಸೌದಿ ಅರೇಬಿಯಾದ ಬಂದರು ನಗರ ಜಿದ್ದಾಗೆ ಆಗಮಿಸಿದಾಗ ಬೈಡನ್ ಅವರನ್ನು ಮಕ್ಕಾ ಪ್ರಾಂತ್ಯದ ಗವರ್ನರ್ ಖಾಲಿದ್ ಅಲ್ ಫೈಸಲ್ ಸ್ವಾಗತಿಸಿದರು. ಯುವರಾಜ ಸ್ವಾಗತಕ್ಕೆ ಆಗಮಿಸಿರಲಿಲ್ಲ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News