ಗುಜರಾತ್ ಗಲಭೆ: ನರೇಂದ್ರ ಮೋದಿ ವಿರುದ್ದ ಅಹ್ಮದ್ ಪಟೇಲ್ ಪಿತೂರಿ ನಡೆಸಿದ್ದರು ಎಂದ ತನಿಖಾ ತಂಡ, ಕಾಂಗ್ರೆಸ್ ಆಕ್ರೋಶ
ಅಹಮದಾಬಾದ್: ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರ ಜಾಮೀನು ಅರ್ಜಿಯನ್ನು ವಿರೋಧಿಸಿದ ಗುಜರಾತ್ ಪೊಲೀಸರು ಸೆಟಲ್ವಾಡ್ ಅವರು ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಅಹ್ಮದ್ ಪಟೇಲ್ ನಡೆಸಿದ್ದ 'ದೊಡ್ಡ ಪಿತೂರಿ'ಯ ಭಾಗವಾಗಿದ್ದರು ಎಂದು ಆರೋಪಿಸಿದ್ದಾರೆ.
2002ರ ಗೋಧ್ರಾ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸುಳ್ಳು ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿದ ಆರೋಪಗಳಿಗೆ ಸಂಬಂಧಿಸಿದಂತೆ ಹೋರಾಟಗಾರ್ತಿ ತೀಸ್ತಾ ಸೆಟಲ್ ವಾಡ್ ಅವರನ್ನು ಇತ್ತೀಚೆಗೆ ಅಹಮದಾಬಾದ್ ಕ್ರೈಂ ಬ್ರಾಂಚ್ ಬಂಧಿಸಿತ್ತು.
2002 ರ ಗುಜರಾತ್ ಗಲಭೆಯ ನಂತರ ರಾಜ್ಯದಲ್ಲಿ ಬಿಜೆಪಿ ಸರಕಾರವನ್ನು ಅಸ್ಥಿರಗೊಳಿಸಲು ಕಾಂಗ್ರೆಸ್ ಹಿರಿಯ ನಾಯಕ ಅಹ್ಮದ್ ಪಟೇಲ್ ಅವರ ಆದೇಶದ ಮೇರೆಗೆ ನಡೆಸಿದ "ದೊಡ್ಡ ಪಿತೂರಿ" ಯಲ್ಲಿ ಸೆಟಲ್ವಾಡ್ ಭಾಗವಾಗಿದ್ದರು ಎಂದು ಸೆಷನ್ಸ್ ನ್ಯಾಯಾಲಯದ ಮುಂದೆ ಪೊಲೀಸರ ವಿಶೇಷ ತನಿಖಾ ತಂಡವು ಸಲ್ಲಿಸಿದ ಅಫಿಡವಿಟ್ ನಲ್ಲಿ ಪ್ರತಿಪಾದಿಸಿದೆ.
ವಿಶೇಷ ತನಿಖಾ ತಂಡದ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್, "ದಿವಂಗತ ಅಹ್ಮದ್ ಪಟೇಲ್ ವಿರುದ್ಧದ ದುರುದ್ದೇಶಪೂರಿತ ಆರೋಪಗಳನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಪಷ್ಟವಾಗಿ ತಳ್ಳಿ ಹಾಕುತ್ತದೆ. 2002 ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಕೋಮು ಹತ್ಯಾಕಾಂಡದ ಯಾವುದೇ ಜವಾಬ್ದಾರಿಯಿಂದ ಮುಕ್ತವಾಗಲು ಇದು ಪ್ರಧಾನಿಯವರ ವ್ಯವಸ್ಥಿತ ತಂತ್ರದ ಭಾಗವಾಗಿದೆ. ಈ ಹತ್ಯಾಕಾಂಡವನ್ನು ನಿಯಂತ್ರಿಸಲು ಅವರಿಗೆ ಇಷ್ಟವಿಲ್ಲದಿರುವುದು ಹಾಗೂ ಅಸಮರ್ಥತೆಯೇ ಆಗಿನ ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಮುಖ್ಯಮಂತ್ರಿ ಮೋದಿಗೆ ತಮ್ಮ 'ರಾಜಧರ್ಮ'ವನ್ನು ನೆನಪಿಸಲು ಕಾರಣವಾಯಿತು ಎಂದಿದೆ.
ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್, “ಪ್ರಧಾನಿ ಅವರ ರಾಜಕೀಯ ಸೇಡಿನ ಯಂತ್ರವು ಅವರ ರಾಜಕೀಯ ವಿರೋಧಿಗಳಾಗಿದ್ದ ಅಗಲಿದವರನ್ನು ಕೂಡ ಬಿಡುವುದಿಲ್ಲ. ಈ ಎಸ್‌ಐಟಿ ತನ್ನ ರಾಜಕೀಯ ಯಜಮಾನನ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ ಹಾಗೂ ಅವರು ಎಲ್ಲಿ ಹೇಳಿದರೂ ಅಲ್ಲಿ ಕುಳಿತುಕೊಳ್ಳುತ್ತದೆ. ಹಿಂದಿನ ಎಸ್‌ಐಟಿ ಮುಖ್ಯಸ್ಥರು ಮುಖ್ಯಮಂತ್ರಿಗೆ ಕ್ಲೀನ್ ಚಿಟ್ ನೀಡಿದ ನಂತರ ರಾಜತಾಂತ್ರಿಕ ಹುದ್ದೆಯನ್ನು ಹೇಗೆ ನೀಡಲಾಯಿತು ಎಂಬುದು ನಮಗೆ ತಿಳಿದಿದೆ’’ ಎಂದಿದೆ.