×
Ad

ಗುಜರಾತ್ ಗಲಭೆ: ಅಫಿಡವಿಟ್‍ನಲ್ಲಿ ಅಹ್ಮದ್ ಪಟೇಲ್ ಹೆಸರು ಉಲ್ಲೇಖಕ್ಕೆ ಪುತ್ರಿಯ ಆಕ್ಷೇಪ

Update: 2022-07-16 13:23 IST

 ಹೊಸದಿಲ್ಲಿ: ಗುಜರಾತ್‍ನಲ್ಲಿ 2002ರಲ್ಲಿ ನಡೆದ ಹಿಂಸಾಚಾರದ ಬಳಿಕ ಅಲ್ಲಿನ ಬಿಜೆಪಿ ಸರಕಾರವನ್ನು ಉರಳಿಸಲು ಅಹ್ಮದ್ ಪಟೇಲ್ ಅವರು  ಸೂಚಿಸಿದಂತೆ ನಡೆದ ದೊಡ್ಡ ಮಟ್ಟದ ಷಡ್ಯಂತ್ರದಲ್ಲಿ ತೀಸ್ತಾ ಸೇಟಲ್ವಾಡ್ ಭಾಗಿಯಾಗಿದ್ದಾರೆ ಎಂದು ಆಕೆಯ ಜಾಮೀನು ಅರ್ಜಿ ವಿರೋಧಿಸುವ ವೇಳೆ ರಾಷ್ಟ್ರೀಯ ತನಿಖಾ ಏಜನ್ಸಿ ಸೆಷನ್ಸ್ ನ್ಯಾಯಾಲಯದ ಮುಂದೆ ಸಲ್ಲಿಸಿದ ತನ್ನ ಅಫಿಡವಿಟ್‍ನಲ್ಲಿ ತಿಳಿಸಿರುವುದಕ್ಕೆ ದಿವಂಗತ ಕಾಂಗ್ರೆಸ್ ನಾಯಕ ಪಟೇಲ್ ಅವರ ಪುತ್ರಿ ಮುಮ್ತಾಜ್ ಪಟೇಲ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಆಗಿನ ಗುಜರಾತ್ ಸೀಎಂ ಆಗಿದ್ದ ನರೇಂದ್ರ ಮೋದಿ ವಿರುದ್ಧ "ಇಷ್ಟೊಂದು ದೊಡ್ಡ ಮಟ್ಟದ ಸಂಚು ಹೂಡಿದ್ದಕ್ಕಾಗಿ" ತಮ್ಮ ತಂದೆಯ ವಿರುದ್ಧ ಏಕೆ ಕಾನೂನು ಕ್ರಮಕೈಗೊಳ್ಳಲಾಗಿರಲಿಲ್ಲ ಎಂದು ಟ್ವೀಟ್ ಮೂಲಕ ಮುಮ್ತಾಜ್ ಪ್ರಶ್ನಿಸಿದ್ದಾರೆ.

"ವಿಪಕ್ಷಗಳಿಗೆ ಕೆಟ್ಟ ಹೆಸರು ತರಲು ರಾಜಕೀಯ ಸಂಚುಗಳಿಗಾಗಿ ಬಳಸಲು ಅಹ್ಮದ್ ಪಟೇಲ್ ಅವರ ಹೆಸರು ಈಗಲೂ ಮಹತ್ವ ಪಡೆದಿದೆ ಎಂದು ನನಗನಿಸುತ್ತದೆ. ಯುಪಿಎ ಆಡಳಿತದ ವೇಳೆ ತಿಸ್ತಾಗೆ ಏಕೆ ಪ್ರಶಸ್ತಿ ನೀಡಲಾಗಿಲ್ಲ ಮತ್ತು ರಾಜ್ಯಸಭಾ ಸದಸ್ಯರನ್ನಾಗಿ ಮಾಡಲಾಗಿಲ್ಲ  ಮತ್ತು ಇಷ್ಟೊಂದು ದೊಡ್ಡ ಸಂಚು ಹೂಡಿದ್ದಕ್ಕೆ ಏಕೆ ಕೇಂದ್ರ 2020ರ ತನಕ ಕೇಂದ್ರ ಕಾನೂನು ಕ್ರಮಕೈಗೊಂಡಿಲ್ಲ" ಎಂದು ಆಕೆ ಕೇಳಿದ್ದಾರೆ.

ಗುಜರಾತ್‍ನ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಘಟನೆಯಲ್ಲಿ ಮೃತರಾಗಿದ್ದ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಅವರ ಪತ್ನಿ ಜಾಕಿಯಾ ಜಾಫ್ರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿ ಈ ಮೂಲಕ ಆಗಿನ ಗುಜರಾತ್ ಸೀಎಂ ನರೇಂದ್ರ ಮೋದಿ ಅವರಿಗೆ ಕ್ಲೀನ್ ಚಿಟ್ ನೀಡಿದ ಬೆನ್ನಲ್ಲೇ ಸಂಚು ಹೂಡಿದ ಆರೋಪದ ಮೇಲೆ ತೀಸ್ತಾ ಅವರ ಬಂಧನವಾಗಿತ್ತು. ನಂತರ ಆಗಿನ ಗುಜರಾತ್ ಪೊಲೀಸ್ ಅಧಿಕಾರಿ ಶ್ರೀಕುಮಾರ್ ಅವರ ಬಂಧನವಾಗಿದ್ದರೆ ತೀರಾ ಇತ್ತೀಚೆಗೆ ಈಗಾಗಲೇ ಇನ್ನೊಂದು ಪ್ರಕರಣದಲ್ಲಿ ಬಂಧನದಲ್ಲಿರುವ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ಟ್ ಅವರನ್ನು ಟ್ರಾನ್ಸ್ ಫರ್ ವಾರಂಟ್ ಮೂಲಕ ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News