ಭಗತ್ ಸಿಂಗ್‍ನನ್ನು ಉಗ್ರವಾದಿ ಎಂದ ಪಂಜಾಬ್ ಸಂಸದ; ಕ್ಷಮೆಯಾಚಿಸಿ ಎಂದು ಆಗ್ರಹಿಸಿದ ಅಕಾಲಿ ದಳ, ಆಪ್
ಹೊಸದಿಲ್ಲಿ: ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ನನ್ನು ಉಗ್ರವಾದಿ ಎಂದು ಬಣ್ಣಿಸಿ ಅಕಾಲಿ ದಳ(ಅಮೃತಸರ್) ಸಂಸದ ಸಿಮ್ರಾನ್‍ಜಿತ್ ಸಿಂಗ್ ಮನ್ನ್ ಅವರು ವಿವಾದದಲ್ಲಿ ಸಿಲುಕಿದ್ದಾರೆ. ಆಮ್ ಆದ್ಮಿ ಪಕ್ಷ ಹಾಗೂ ಅಕಾಲಿ ದಳದ ನಾಯಕರು ಸಂಸದನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಮೂಲ ಅಕಾಲಿ ದಳದಿಂದ ಸಿಡಿದ ಒಂದು ಗುಂಪು ಸ್ಥಾಪಿಸಿದ ಪಕ್ಷ ಅಕಾಲಿ ದಳ (ಅಮೃತಸರ್) ಆಗಿದೆ.
ನೂತನವಾಗಿ ಆಯ್ಕೆಯಾದ ಸಂಸದ ಮನ್ನ್ ಅವರು ಈ ಹಿಂದೆ ಭಗತ್ ಸಿಂಗ್ ಕುರಿತು ಆ ಪದದ ಪ್ರಯೋಗ ಮಾಡಿದ್ದ ಬಗ್ಗೆ ಗುರುವಾರ ಕರ್ನಾಲ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಪ್ರಶ್ನಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಸಂಸದ "ಸರ್ದಾರ್ ಭಗತ್ ಸಿಂಗ್ ಓರ್ವ ಯುವ ಇಂಗ್ಲಿಷ್ ಅಧಿಕಾರಿಯನ್ನು ಕೊಂದಿದ್ದ, ಆತ ಅಮೃತ್‍ಧಾರಿ ಸಿಖ್ ಕಾನ್‍ಸ್ಟೇಬಲ್ ಚನ್ನನ್ ಸಿಂಗ್‍ನನ್ನು ಹತ್ಯೆಗೈದಿದ್ದ. ಆ ಸಂದರ್ಭ ಆತ ನ್ಯಾಷನಲ್ ಅಸೆಂಬ್ಲಿಯತ್ತ ಬಾಂಬ್ ತೂರಿದ್ದ. ಭಗತ್ ಸಿಂಗ್ ಓರ್ವ ಉಗ್ರವಾದಿ ಹೌದೇ ಅಥವಾ ಅಲ್ಲವೇ ಎಂದು ನೀವೇ ಹೇಳಿ" ಎಂದಿದ್ದರು.
ತಮ್ಮ ಹೇಳಿಕೆಗೆ ಮನ್ನ್ ಅವರು ಕ್ಷಮೆಯಾಚಿಸಬೇಕು ಎಂದು ಪಂಜಾಬ್ ಸಚಿವ ಹಾಗೂ ಆಪ್ ನಾಯಕ ಗುರ್ಮೀತ್ ಸಿಂಗ್ ಹಯೆರ್ ಆಗ್ರಹಿಸಿದ್ದಾರೆ.
"ಭಗತ್ ಸಿಂಗ್‍ಗೆ ಪಂಜಾಬ್ ಸರಕಾರ ಹುತಾತ್ಮನ ಸ್ಥಾನಮಾನ ನೀಡುತ್ತದೆ, ಮನ್ನ್ ಕ್ಷಮೆಯಾಚಿಸದೇ ಇದ್ದರೆ ಪಂಜಾಬ್ ಸರಕಾರ ಅವರ ವಿರುದ್ಧ ಕಾನೂನು ಕ್ರಮಕೈಗೊಳಲಿದೆ" ಎಂದು ಸಚಿವರು ಹೇಳಿದರು. ಅಕಾಲಿ ದಳ ನಾಯಕ ಹಾಗೂ ಮಾಜಿ ಕೇಂದ್ರ ಸಚಿವೆ ಹಸೀಮ್ರತ್ ಕೌರ್ ಬಾದಲ್ ಕೂಡ ಮನ್ನ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
"ಅವರನ್ನು (ಭಗತ್ ಸಿಂಗ್) ಓರ್ವ ಉಗ್ರವಾದಿ ಎಂದು ಹೇಳಿ ಅವರು ನಮ್ಮ ರಾಷ್ಟ್ರೀಯ ಹೀರೋಗೆ ಅಗೌರವ ತೋರಿದ್ದಾರೆ" ಎಂದು ಅವರು ಬರೆದಿದ್ದಾರೆ. ಅಕಾಲಿ ದಳ ಮುಖ್ಯಸ್ಥ ಮತ್ತು ಸಂಸದ ಸುಖಬೀರ್ ಸಿಮಗ್ ಬಾದಲ್ ಪ್ರತಿಕ್ರಿಯಿಸಿ, ಮನ್ನ್ ಅವರ ಹೇಳಿಕೆ ಜಗತ್ತಿನಾದ್ಯಂತ ಸಿಖರ ಘನತೆಯನ್ನು ಕುಗ್ಗಿಸಿದೆ ಎಂದರು.