ಶಿರಾಡಿ ಘಾಟ್ ರಸ್ತೆ ಕುಸಿತ ಭೀತಿ; ಮಂಗಳೂರು-ಬೆಂಗಳೂರು ವಾಹನ ಸಂಚಾರ ಮಾರ್ಗಸೂಚಿ ಪ್ರಕಟ

Update: 2022-07-17 12:44 GMT

ಮಂಗಳೂರು: ರಾ.ಹೆ.75ರ ಬೆಂಗಳೂರು-ಮಂಗಳೂರು ರಸ್ತೆಯ ಮಾರನಹಳ್ಳಿಯಿಂದ ದೊಣಿಗಾಲ್-ಹೆಗ್ಗದ್ದೆವರೆಗಿನ ಶಿರಾಡಿ ಘಾಟ್ ರಸ್ತೆಯಲ್ಲಿ ಮತ್ತಷ್ಟು ಭೂ ಕುಸಿತದ ಭೀತಿಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಹಾಸನ ಜಿಲ್ಲಾಧಿಕಾರಿ ಆರ್. ಗಿರೀಶ್ ಶುಕ್ರವಾರ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಆದೇಶ ಹೊರಡಿಸಿದ್ದರೆ, ರವಿವಾರ ಅದಕ್ಕೆ ಪೂರಕವಾಗಿ ಮಂಗಳೂರು-ಬೆಂಗಳೂರು ಹಾಗೂ ಬೆಂಗಳೂರು-ಮಂಗಳೂರು ವಾಹನಗಳ ಸಂಚಾರಕ್ಕೆ ಮಾರ್ಗಸೂಚಿ ಪ್ರಕಟಿಸಿದ್ದಾರೆ.

ಬೆಂಗಳೂರಿನಿಂದ ಮಂಗಳೂರಿಗೆ ಬರುವ ಕಾರು, ಜೀಪು, ಆ್ಯಂಬುಲೆನ್ಸ್, ಟೆಂಪೋ, ಮಿನಿ ವ್ಯಾನ್, ದ್ವಿಚಕ್ರ ವಾಹನಗಳು ಪ್ರತೀ ಗಂಟೆಗೆ 30 ಕಿ.ಮೀ. ವೇಗ ಮಿತಿಯಲ್ಲಿ ಸಕಲೇಶಪುರ, ಆನೆಮಹಲ್, ಕ್ಯಾನಹಳ್ಳಿ, ಚಿನ್ನಳ್ಳಿ, ಕಡಗರವಳ್ಳಿ, ಮಾರನಹಳ್ಳಿ ಮಾರ್ಗವಾಗಿ ಸಂಚರಿಸಬೇಕು. ಅದೇ ರೀತಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ಈ ವಾಹನಗಳು ಪ್ರತೀ ಗಂಟೆಗೆ 30 ಕಿ.ಮೀ. ವೇಗ ಮಿತಿಯಲ್ಲಿ ಮಾರನಹಳ್ಳಿ, ಕಾಡುಮನೆ, ಹಾರ್ಲೆ, ಕೂಡಿಗೆ, ಆನೆಮಹಲ್, ಸಕಲೇಶಪುರ ಮಾರ್ಗವಾಗಿ ಸಂಚರಿಸಬೇಕು ಎಂದು ತಿಳಿಸಿದ್ದಾರೆ.

ಈ ಮಾರ್ಗದಲ್ಲಿ ಏಕಮುಖ ಸಂಚಾರ ಮಾತ್ರವಿರುತ್ತದೆ. ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಯ ನಿಯುಕ್ತಿಗೆ ಹಾಸನ ಜಿಲ್ಲಾ ಎಸ್ಪಿಗೆ ನಿರ್ದೇಶಿಸಿದ್ದಾರೆ. ಸೂಕ್ತ ನಾಮಫಲಕ ಅಳವಡಿಸಲು ರಾ.ಹೆ. ವಿಭಾಗದ ಕಾರ್ಯಪಾಲಕ ಇಂಜಿನಿಯರ್‌ಗೆ ಆದೇಶದಲ್ಲಿ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News