×
Ad

ರಾಷ್ಟ್ರಪತಿ ಚುನಾವಣೆ: ವಿಪಕ್ಷ ಅಭ್ಯರ್ಥಿ ಯಶವಂತ ಸಿನ್ಹಾ ಅಂತಿಮ ಮನವಿ

Update: 2022-07-17 19:46 IST
Photo:PTI

 ಹೊಸದಿಲ್ಲಿ,ಜು.17: ಸೋಮವಾರ ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿಪಕ್ಷಗಳ ಅಭ್ಯರ್ಥಿಯಾಗಿರುವ ಯಶವಂತ ಸಿನ್ಹಾ ಅವರು ತನಗೆ ಮತ ನೀಡುವಂತೆ ರವಿವಾರ ಎಲ್ಲ ರಾಜಕೀಯ ಪಕ್ಷಗಳಿಗೆ ಅಂತಿಮ ಮನವಿಯನ್ನು ಮಾಡಿಕೊಂಡಿದ್ದಾರೆ. ಸಿನ್ಹಾ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಎದುರಿಸುತ್ತಿದ್ದಾರೆ.

ರಾಷ್ಟ್ರಪತಿ ಚುನಾವಣೆಯು ಇಬ್ಬರು ವ್ಯಕ್ತಿಗಳ ನಡುವೆ ಅಲ್ಲ,ಎರಡು ಸಿದ್ಧಾಂತಗಳ ನಡುವಿನ ಹೋರಾಟವಾಗಿದೆ ಎಂದು ಸಿನ್ಹಾ ಹೇಳಿಕೆಯಲ್ಲಿ ಪುನರುಚ್ಚರಿಸಿದ್ದಾರೆ.
‘ನಾನು ಭಾರತದ ಪ್ರಜಾಪ್ರಭುತ್ವದ ರಕ್ಷಣೆಗೆ ಕಟಿಬದ್ಧನಾಗಿದ್ದೇನೆ ಮತ್ತು ಮುರ್ಮು ದಿನನಿತ್ಯವೂ ಸಂವಿಧಾನದ ಮೇಲೆ ದಾಳಿ ನಡೆಸುತ್ತಿರುವವರ ಬೆಂಬಲವನ್ನು ಹೊಂದಿದ್ದಾರೆ. ನಾನು ಸಂವಿಧಾನದ ಆಧಾರಸ್ತಂಭವಾಗಿರುವ ಜಾತ್ಯತೀತತೆಯ ರಕ್ಷಣೆಗಾಗಿ ಕಣದಲ್ಲಿದ್ದೇನೆ ಮತ್ತು ನನ್ನ ಎದುರಾಳಿ ಅಭ್ಯರ್ಥಿ ಈ ಸ್ತಂಭವನ್ನು ನಾಶಗೊಳಿಸಲು ಹಾಗೂ ಬಹುಸಂಖ್ಯಾತ ಪಾರಮ್ಯವನ್ನು ಸ್ಥಾಪಿಸಲು ಸಂಕಲ್ಪಿಸಿರುವ ಪಕ್ಷಕ್ಕೆ ಸೇರಿದವರಾಗಿದ್ದಾರೆ. ನಾನು ಒಮ್ಮತ ಮತ್ತು ಸಹಕಾರದ ರಾಜಕೀಯವನ್ನು ಉತ್ತೇಜಿಸಲು ಕಣದಲ್ಲಿದ್ದೇನೆ ಮತ್ತು ನನ್ನ ಎದುರಾಳಿ ಅಭ್ಯರ್ಥಿ ಸಂಘರ್ಷದ ರಾಜಕೀಯವನ್ನು ನಡೆಸುತ್ತಿರುವ ಪಕ್ಷದ ಬೆಂಬಲವನ್ನು ಹೊಂದಿದ್ದಾರೆ ’ ಎಂದು ಸಿನ್ಹಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿಯನ್ನು ಸ್ಪಷ್ಟವಾಗಿ ಉಲ್ಲೇಖಿಸಿರುವ ಅವರು,ಮುಂದಿನ ರಾಷ್ಟ್ರಪತಿಯಾಗಿ ಮುರ್ಮು ಆಯ್ಕೆಯಾದರೆ ಅವರು ಪ್ರಜಾಸತ್ತಾತ್ಮಕ ಭಾರತವನ್ನು ಕಮ್ಯುನಿಸ್ಟ್ ಚೀನಾದ ನಕಲನ್ನಾಗಿ ಪರಿವರ್ತಿಸುವ ಗುರಿಯನ್ನು ಹೊಂದಿರುವವರ ನಿಯಂತ್ರಣದಲ್ಲಿರುತ್ತಾರೆ. ಒಂದು ರಾಷ್ಟ್ರ,ಒಂದು ಪಕ್ಷ,ಓರ್ವ ಸರ್ವೋಚ್ಚ ನಾಯಕ. ಇದನ್ನು ನಿಲ್ಲಿಸಬೇಡವೇ? ನಿಲ್ಲಿಸಲೇಬೇಕು ಮತ್ತು ನೀವು ಮಾತ್ರ ಅದನ್ನು ನಿಲ್ಲಿಸಲು ಸಾಧ್ಯ ಎಂದು ಹೇಳಿದ್ದಾರೆ.
ಶನಿವಾರ ಟ್ವಿಟರ್ನಲ್ಲಿ ವೀಡಿಯೊವೊಂದನ್ನು ಶೇರ್ ಮಾಡಿಕೊಂಡಿದ್ದ ಸಿನ್ಹಾ ಆತ್ಮಸಾಕ್ಷಿಗೆ ಅನುಗುಣವಾಗಿ ಮತಗಳನ್ನು ಚಲಾಯಿಸುವಂತೆ ಎಲ್ಲ ಸಂಸದರು ಮತ್ತು ಶಾಸಕರನ್ನು ಆಗ್ರಹಿಸಿದ್ದರು.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News