ಲುಲು ಮಾಲ್‌ನಲ್ಲಿ ನಮಾಝ್ ನಿರ್ವಹಿಸಿದವರಿಗೆ ನಮಾಝ್ ಮಾಡುವುದು ಹೇಗೆ ಎಂದೇ ಗೊತ್ತಿರಲಿಲ್ಲ: ವರದಿ
ಲಕ್ನೋ: ಉತ್ತರ ಪ್ರದೇಶದ ಲಕ್ನೋದಲ್ಲಿ ಇತ್ತೀಚೆಗೆ ಶುಭಾರಂಭಗೊಂಡ ಲುಲು ಮಾಲ್‌ನಲ್ಲಿ ಜನರ ಗುಂಪೊಂದು ನಮಾಝ್ ಮಾಡುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇದರ ಬೆನ್ನಿಗೆ ಹಿಂದುತ್ವವಾದಿ ಸಂಘಟನೆಗಳು ಲುಲು ಮಾಲ್ ಬಹಿಷ್ಕಾರಕ್ಕೆ ಕರೆ ನೀಡಿದ್ದು, ಮಾಲ್‌ನಲ್ಲಿ ಹಿಂದೂ ಧಾರ್ಮಿಕ ಪೂಜೆ ಮಾಡಲು ಮುಂದಾಗಿತ್ತು. ಇದೀಗ, ಈ ಬೆಳವಣಿಗೆಗಳಿಗೆ ಅನಿರೀಕ್ಷಿತ ತಿರುವು ಲಭಿಸಿದ್ದು, ಇದೆಲ್ಲವೂ ಪೂರ್ವ ನಿಯೋಜಿತವಾಗಿತ್ತೇ ಎಂಬ ಪ್ರಶ್ನೆ ಎದ್ದಿದೆ.
ಮಾಲ್‌ನಲ್ಲಿ ಮುಸ್ಲಿಮರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿದರೆ, ಅಲ್ಲಿ ಹಿಂದೂ ಧಾರ್ಮಿಕ ವಿಧಿ ವಿಧಾನಗಳನ್ನು ಆಚರಿಸುವ ಹಕ್ಕು ಇರಬೇಕು ಎಂದು ಪ್ರತಿಪಾದಿಸಿದ್ದ ಹಿಂದುತ್ವವಾದಿ ಸಂಘಟನೆ ರಾಮಾಯಣದ ಒಂದು ಭಾಗವನ್ನು ಓದಲು ಅವಕಾಶ ನೀಡಬೇಕೆಂದು ಒತ್ತಾಯಿಸಿ ಮಾಲ್‌ಗೆ ಆಗಮಿಸಿತ್ತು. ಮಾಲ್‌ನಲ್ಲಿ ಕೆಲಸ ಮಾಡುವ 80% ಪುರುಷರು ಮುಸ್ಲಿಮರು ಆದರೆ ಮಹಿಳೆಯರೆಲ್ಲರೂ ಹಿಂದೂಗಳು ಎಂದು ಅವರು ಆರೋಪಿಸಿದ್ದು, ಇದು ಲವ್ ಜಿಹಾದ್‌ನ ಭಾಗ ಎಂದು ಲುಲು ಮಾಲ್ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದವು.
ಇದರ ಬೆನ್ನಲ್ಲೇ ಮಾಲ್ ಆಡಳಿತ ಮಂಡಳಿ ಹಿಂದುತ್ವ ಸಂಘಟನೆಗಳ ಆರೋಪ ತಳ್ಳಿ ಹಾಕಿದ್ದು, ಪೊಲೀಸರು ಮತ್ತು ಉಗ್ರ ಹಿಂದುತ್ವವಾದಿ ಸಂಘಟನೆಗೆ ತನ್ನ ಉದ್ಯೋಗಿಗಳ ವಿವರವನ್ನು ನೀಡಿದೆ, ಅಲ್ಲದೆ ನಮಾಝ್ ಮಾಡಿದವರ ವಿರುದ್ಧ ದೂರನ್ನೂ ನೀಡಿದೆ ಎಂದು nationalheraldindia.com ವರದಿ ಮಾಡಿದೆ.
ಮಾಲ್ ನ ಖ್ಯಾತಿಗೆ ಧಕ್ಕೆ ತರಲು ಮತ್ತು ಸಮುದಾಯಗಳ ನಡುವೆ ದ್ವೇಷವನ್ನು ಉಂಟುಮಾಡಲು ಇದು ಉದ್ದೇಶಪೂರ್ವಕ ಕಿಡಿಗೇಡಿತನದ ಕೃತ್ಯವಾಗಿದೆ ಎಂದು ನಮಾಝ್ ನಿರ್ವಹಿಸುವ ವಿಡಿಯೋ ವೈರಲ್ ಆದಾಗಿನಿಂದಲೂ ಆರೋಪ ಕೇಳಿ ಬಂದಿತ್ತು. ಇದಕ್ಕೆ ಪೂರಕೆವೆನಿಸುವಂತಹ ಸಿಸಿಟಿವಿ ದೃಶ್ಯ ಈಗ ಲಭಿಸಿದೆ ಎಂದು ನ್ಯಾಷನಲ್ ಹೆರಾಲ್ಡ್ ಇಂಡಿಯಾ ವರದಿ ಹೇಳಿದೆ.
ಎಂಟು ಪುರುಷರು ಒಟ್ಟಿಗೆ ಮಾಲ್‌ಗೆ ಪ್ರವೇಶಿಸುವ ಸಿಸಿಟಿವಿ ದೃಶ್ಯಾವಳಿಗಳನ್ನು ಮಾಲ್ ಹಂಚಿಕೊಂಡಿದ್ದು, ವಿಡಿಯೋದಲ್ಲಿ ಕಂಡು ಬರುವ ಯಾರೂ ಯಾರೂ ಮಾಲ್ ಸುತ್ತಿ ನೋಡಲು, ಅಥವಾ ಏನನ್ನಾದರೂ ಖರೀದಿಸಲು ಬಂದಿಲ್ಲ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಏಷ್ಯಾದಲ್ಲೇ ದೊಡ್ಡ ಮಾಲ್ ಆಗಿರುವ ಲಖ್ನೋ ಲುಲು ಮಾಲ್‌ನಲ್ಲಿ ಇತರರು ಸೆಲ್ಫಿ ತೆಗೆದುಕೊಳ್ಳಲು ಹಾಗೂ ಫೋಟೋ ಕ್ಲಿಕ್ಕಿಸುತ್ತಿದ್ದರೂ, ಈ ಎಂಟು ಮಂದಿ ಅದರಲ್ಲಿ ಯಾವುದೇ ಆಸಕ್ತಿ ವಹಿಸದೆ ಏಕಾಏಕಿ ನಮಾಝ್ ಮಾಡಲು ನಿಂತಿದ್ದಾರೆ. ಆತುರ ಆತುರವಾಗಿ ನಮಾಝ್ ಭಂಗಿಯಲ್ಲಿ ಕೂರಲು ಸ್ಥಳ ಹುಡುಕಿದ ಇವರುಗಳಿಗೆ ನೆಲಮಹಡಿಯಲ್ಲಿ ಮತ್ತು ಮೊದಲ ಮಹಡಿಯಲ್ಲಿ ನಮಾಝ್ ಮಾಡಲು ಭದ್ರತಾ ಸಿಬ್ಬಂದಿಗಳು ತಡೆದಿರುವುದು ಸಿಸಿಟಿವಿ ದೃಶ್ಯದಲ್ಲಿ ದಾಖಲಾಗಿದೆ. ಅಲ್ಲಿಂದ ಎರಡನೇ ಮಹಡಿಗೆ ತಲುಪಿದ ತಂಡ, ಅಲ್ಲಿ ಜನಸಂದಣಿ ಕಡಿಮೆ ಇರುವುದನ್ನೇ ಲಾಭ ಮಾಡಿಕೊಂಡು ಅಲ್ಲೇ ನಮಾಝ್ ಮಾಡಲು ನಿಂತಿದ್ದಾರೆ. ಕುತೂಹಲಕಾರಿ ಎಂಬಂತೆ, ತಂಡದ ಎಂಟು ಮಂದಿಯಲ್ಲಿ ಆರು ಮಂದಿ ನಮಾಝ್ ಭಂಗಿಯಲ್ಲಿ ಕೂತು ಕೊಂಡರೆ ಉಳಿದಿಬ್ಬರು ಅದನ್ನು ಚಿತ್ರೀಕರಿಸುವಲ್ಲಿ ನಿರತರಾಗಿದ್ದಾರೆ. ವಿಚಿತ್ರವೆಂಬಂತೆ, ಸಿಸಿಟಿವಿ ದೃಶ್ಯಾವಳಿಯ ಸಂಪೂರ್ಣ ಚಿತ್ರಣ ಗಮನಿಸಿದರೆ ಅವರಿಗೆ ನಮಾಝ್ ನಿರ್ವಹಿಸುವುದು ಹೇಗೆ ಎಂಬುದೂ ಗೊತ್ತಿಲ್ಲದಿರುವುದು ಕಂಡು ಬಂದಿದೆ ಎಂದು ನ್ಯಾಷನಲ್ ಹೆರಾಲ್ಡ್ ವರದಿ ಹೇಳಿದೆ.
ನಮಾಝ್ ಅನ್ನು ಹೇಗೆ ನಿರ್ವಹಿಸಲಾಗುತ್ತದೆ ಎಂಬುದರ ಕುರಿತು ಅವರಿಗೆ ಯಾವುದೇ ಸುಳಿವು ಇಲ್ಲ ಎಂದು ದೃಶ್ಯಾವಳಿಗಳು ಸ್ಪಷ್ಟಪಡಿಸುತ್ತವೆ ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ (ದಕ್ಷಿಣ) ರಾಜೇಶ್ ಕುಮಾರ್ ಶ್ರೀವಾಸ್ತವ ಒಪ್ಪಿಕೊಂಡಿದ್ದಾರೆ. ಅಲ್ಲದೆ ಶೀಘ್ರವೇ ಕಿಡಿಗೇಡಿಗಳನ್ನು ಬಂಧಿಸಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ 'ನಮಾಜಝ್' ಅನ್ನು ಪೂರ್ಣಗೊಳಿಸಲು ಏಳರಿಂದ ಎಂಟು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ, ಆದರೆ ಆತುರದಿಂದ ಈ ಪುರುಷರು ಅದನ್ನು ಕೇವಲ 18 ಸೆಕೆಂಡುಗಳ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಿದ್ದಾರೆ. ಅಲ್ಲದೆ, ಮುಸ್ಲಿಮರು ನಮಾಝ್ ಮಾಡಲು ಪಶ್ಚಿಮ ದಿಕ್ಕಿಗೆ (ಕಅಬಾ ಗೆ ಅಭಿಮುಖವಾಗಿ) ನಿಲ್ಲುತ್ತಾರೆ, ಆದರೆ, ಪಶ್ಚಿಮ ದಿಕ್ಕಿಗೆ ಮುಖ ಮಾಡಿ ನಿಲ್ಲಲೂ ಈ ಗುಂಪಿನ ಸದಸ್ಯರಿಗೆ ಗೊತ್ತಿರಲಿಲ್ಲ ಎಂದು ಸಾಮಾಜಿಕ ಕಾರ್ಯಕರ್ತೆ ತಾಹಿರಾ ಹಸನ್ ಅವರು ಹೇಳಿರುವುದಾಗಿ ನ್ಯಾಷನಲ್ ಹೆರಾಲ್ಡ್ ವರದಿ ಉಲ್ಲೇಖಿಸಿದೆ.
ತರಾತುರಿಯಲ್ಲಿ ನಮಾಝ್ ಮಾಡಿ ವೀಡಿಯೋ ರೆಕಾರ್ಡ್ ಮಾಡಿದ ನಂತರ ಅವರು ಮಾಲ್‌ನಿಂದ ಅಷ್ಟೇ ತರಾತುರಿಯಲ್ಲಿ ನಿರ್ಗಮಿಸಿದ್ದಾರೆ. ಕುತೂಹಲಕ್ಕಾದರೂ ಮಾಲ್ ಸುತ್ತಲೂ ನೋಡುವ ಮತ್ತು ವೀಕ್ಷಿಸುವ ಪ್ರಯತ್ನವನ್ನು ಕೂಡಾ ಮಾಡಲಿಲ್ಲ ಎಂದು ವರದಿ ಹೇಳಿದೆ. ಈ ಎಲ್ಲಾ ಸನ್ನಿವೇಶಗಳ ಹಿನ್ನೆಲೆಯಲ್ಲಿ ಒಟ್ಟಾರೆ ನಮಾಝ್ ವಿವಾದವು ಲುಲು ಮಾಲ್ ವಿರುದ್ಧ ನಡೆಸಿದ ಪಿತೂರಿಯೇ ಎಂಬ ಪ್ರಶ್ನೆಯನ್ನು ಎಬ್ಬಿಸಿದೆ.