ಸುಳ್ಯ: ಅರಮನೆಗಯದಲ್ಲಿ ಸೇತುವೆ ಆಗುವ ತನಕ ʼಮತದಾನ ಬಹಿಷ್ಕಾರʼ ಬ್ಯಾನರ್!

Update: 2022-07-17 18:20 GMT

ಸುಳ್ಯ: ತಾಲೂಕಿನ ಆರಂತೋಡು ಗ್ರಾಮದ ಅಡ್ತಲೆ ವಾರ್ಡ್‌ಗೆ ಒಳಪಟ್ಟ, ಅರಮನೆಗಯದ ಮೂಲಕ ಸಂಚರಿಸುವ ಅರಂತೋಡು -ಪಿಂಡಿಮನೆ - ಮಿತ್ತಡ್ಕ -ಮಕರ್ಂಜ ರಸ್ತೆಯಲ್ಲಿ ಅರಮನೆಗಾಯ ಎಂಬಲ್ಲಿ ಬಲ್ನಾಡು ಹೊಳೆಗೆ ಸೇತುವೆ ಅಥವಾ ತೂಗು ಸೇತುವೆ ತುರ್ತಾಗಿ ನಿರ್ಮಿಸಬೇಕು. ಸೇತುವೆ ನಿರ್ಮಾಣ ಆಗುವ ತನಕ ಮತದಾನ ಬಹಿಷ್ಕಾರ ಅಥವಾ ನೋಟ ಮತ ನೀಡುವ ಬಗ್ಗೆ ಈ ಭಾಗದ ಜನತೆ ತೀರ್ಮಾನಿಸಲಾಗಿದೆ ಎಂದು ಬ್ಯಾನರ್ ಒಂದು ಪ್ರತ್ಯಕ್ಷವಾಗಿದೆ.

ಈ ರಸ್ತೆಯು ಮರ್ಕಂಜ ಗ್ರಾಮದ ಮಿತ್ತಡ್ಕ ಎಂಬಲ್ಲಿ ಮರ್ಕಂಜ-ದೊಡ್ಡತೋಟ ರಸ್ತೆಯನ್ನು ಸಂಪರ್ಕಿಸುತ್ತದೆ. ಅರಮನೆಗಯ ಎಂಬುದು ಪರಿಶಿಷ್ಟ ಪಂಗಡದ ಕಾಲೋನಿಯಾಗಿದ್ದು ಇಲ್ಲಿ ಅನೇಕ ಕುಟುಂಬಗಳು ಹೊಳೆಯ ಎರಡು ಬದಿ ವಾಸಿಸುತಿದ್ದಾರೆ.

ಮಳೆಗಾಲದಲ್ಲಿ ಪ್ರತಿ ವರ್ಷ ಸುಮಾರು ಏಳೆಂಟು ತಿಂಗಳು ಈ ಹೊಳೆಯು ತುಂಬಿ ಹರಿಯುವ ಕಾರಣ ಇಲ್ಲಿ ದ್ವೀಪವಾಗುತ್ತಿದೆ. ಅರಂತೋಡು -ಮಿತ್ತಡ್ಕ - ಮರ್ಕಂಜ ಹಾಗೂ ದೊಡ್ಡತೋಟಗಳಿಗೆ ಈ ರಸ್ತೆಯು ಅತೀ ಹತ್ತಿರದ ಸಂಪರ್ಕ ರಸ್ತೆಯಾಗಿರುವ ಕಾರಣ ದಿನಂಪ್ರತಿ ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ.

ಪ್ರತಿ ವರ್ಷ ಈ ತೂಗುಪಾಲಕ್ಕೆ ಸ್ಥಳೀಯ ಗ್ರಾಮ ಪಂಚಾಯಿತಿ ನೀಡುವ ಅಲ್ಪ ಮೊತ್ತದ ಅನುದಾನ ಬಳಸಿಕೊಂಡು ಅಡಿಕೆ ಮರದ ಸಲಾಕೆಗಳನ್ನು ಸ್ಥಳೀಯರೇ ಹಾಕಿ ತಾತ್ಕಾಲಿಕ ಪಾಲ ನಿರ್ಮಿಸಿ ಜನರು ಓಡಾಡುತ್ತಾರೆ. ಆದರೆ ಈಗ ರೋಪ್ ಶಿಥಿಲವಾಗಿದ್ದು ಇಲ್ಲಿ ಸೇತುವೆ ಸುಸಜ್ಜಿತ ತೂಗು ಸೇತುವೆಯನ್ನಾದರು ನಿರ್ಮಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News