ತಮಿಳುನಾಡಿನಲ್ಲಿ ಶಾಲಾ ವಿದ್ಯಾರ್ಥಿನಿ ಆತ್ಮಹತ್ಯೆ: ಮತ್ತೊಂದು ಸುತ್ತಿನ ಶವಪರೀಕ್ಷೆಗೆ ಹೈಕೋರ್ಟ್ ಆದೇಶ
ಚೆನ್ನೈ: ಚೆನ್ನೈನಿಂದ ಸುಮಾರು 260 ಕಿ.ಮೀ ದೂರದಲ್ಲಿರುವ ತಮಿಳುನಾಡಿನ ಕಲ್ಲಕುರಿಚಿಯಲ್ಲಿ ಉದ್ವಿಗ್ನತೆಗೆ ಕಾರಣವಾಗಿದ್ದ ಶಾಲಾ ವಿದ್ಯಾರ್ಥಿನಿಯೋರ್ವಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಮತ್ತೊಂದು ಸುತ್ತಿನ ಮರಣೋತ್ತರ ಪರೀಕ್ಷೆಗೆ ಆದೇಶಿಸಿದೆ ಎಂದು NDTV ವರದಿ ಮಾಡಿದೆ.
ವಿದ್ಯಾರ್ಥಿಯ ಸಾವಿನ ನಂತರ ಖಾಸಗಿ ವಸತಿ ಶಾಲೆಯ ಕ್ಯಾಂಪಸ್‌ನಲ್ಲಿ ಗುಂಪೊಂದು ದಾಂಧಲೆ ನಡೆಸಿದ ಒಂದು ದಿನದ ನಂತರ ನ್ಯಾಯಾಲಯದ ತೀರ್ಪು ಬಂದಿದೆ. ಗಲಭೆಕೋರರು ಹಾಗೂ ಅವರಿಗೆ ಪ್ರಚೋದನೆ ನೀಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನ್ಯಾಯಾಲಯ ಸೂಚಿಸಿದೆ.
ಆತ್ಮಹತ್ಯೆಗೆ ಸಂಬಂಧಿಸಿದಂತೆ ಶಾಲೆಯ ಪ್ರಧಾನ ಕಾರ್ಯದರ್ಶಿಯನ್ನು ಪೊಲೀಸರು ಬಂಧಿಸಿದ್ದಾರೆ. ಕ್ಯಾಂಪಸ್‌ನಲ್ಲಿ ನಡೆದ ಗಲಭೆಗಾಗಿ ನೂರಕ್ಕೂ ಹೆಚ್ಚು ಶಂಕಿತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಜುಲೈ 13 ರಂದು ವಿದ್ಯಾರ್ಥಿನಿ ಹಾಸ್ಟೆಲ್‌ನ ಮೂರನೇ ಮಹಡಿಯಿಂದ ಜಿಗಿದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರು ಶಿಕ್ಷಕರು ಮಾನಸಿಕವಾಗಿ ಕಿರುಕುಳ ಹಾಗೂ ಅವಮಾನ ಮಾಡಿದ್ದಾರೆ ಎಂದು ಆಕೆಯ ಕುಟುಂಬ ಆರೋಪಿಸಿದೆ.
ವಿದ್ಯಾರ್ಥಿನಿಯು ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ಆಕೆ ತಾನು ಹಲವಾರು ವಿಷಯಗಳಲ್ಲಿ ಕಷ್ಟಪಡುತ್ತಿದ್ದೇನೆ ಹಾಗೂ ತನ್ನ ಶೈಕ್ಷಣಿಕ ಸಾಧನೆಗಾಗಿ ತನ್ನ ಶಿಕ್ಷಕರಿಂದ ಅವಮಾನಿತನಾಗಿದ್ದೇನೆ ಎಂದು ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.