ಬುಧವಾರದವರೆಗೆ 5 ಪ್ರಕರಣಗಳಲ್ಲಿ ಮುಹಮ್ಮದ್ ಝುಬೈರ್ ವಿರುದ್ಧ ಕ್ರಮ ಕೈಗೊಳ್ಳದಂತೆ ಸುಪ್ರೀಂಕೋರ್ಟ್ ಸೂಚನೆ
ಹೊಸದಿಲ್ಲಿ,ಜು.18: ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ ಆರೋಪದಲ್ಲಿ ಉತ್ತರ ಪ್ರದೇಶದಲ್ಲಿ ತನ್ನ ವಿರುದ್ಧ ದಾಖಲಾಗಿರುವ ಐದು ಎಫ್ಐಆರ್ಗಳನ್ನು ರದ್ದುಗೊಳಿಸುವಂತೆ ಕೋರಿ ಆಲ್ಟ್ ನ್ಯೂಸ್ ನ ಸಹಸ್ಥಾಪಕ ಮುಹಮ್ಮದ್ ಝುಬೈರ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಜು.20ರಂದು ನಡೆಸುವುದಾಗಿ ಸರ್ವೋಚ್ಚ ನ್ಯಾಯಾಲಯವು ಸೋಮವಾರ ಹೇಳಿದೆ. ಅಲ್ಲಿಯವರೆಗೆ ಈ ಎಫ್ಐಆರ್ಗಳಿಗೆ ಸಂಬಂಧಿಸಿದಂತೆ ಝುಬೈರ್ ವಿರುದ್ಧ ಯಾವುದೇ ಆತುರದ ಕ್ರಮವನ್ನು ತೆಗೆದುಕೊಳ್ಳದಂತೆ ಅದು ಉ.ಪ್ರದೇಶ ಪೊಲೀಸರಿಗೆ ನಿರ್ದೇಶ ನೀಡಿದೆ.
ಝುಬೈರ್ ಪರ ನ್ಯಾಯವಾದಿ ವೃಂದಾ ಗ್ರೋವರ್ ಅವರು ಉಲ್ಲೇಖಿಸಿದ ಬಳಿಕ ವಿಷಯವನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ ಮತ್ತು ಎ.ಎಸ್.ಬೋಪಣ್ಣ ಅವರ ಪೀಠವು ಈ ಆದೇಶವನ್ನು ಹೊರಡಿಸಿತು. ಸ್ವಲ್ಪ ಹೊತ್ತು ನಿವೇದನೆಗಳನ್ನು ಆಲಿಸಿದ ಪೀಠವು ವಿಷಯವನ್ನು ಜು.20ರಂದು ವಿಚಾರಣೆಗೆ ಪಟ್ಟಿ ಮಾಡುವಂತೆ ಸರ್ವೋಚ್ಚ ನ್ಯಾಯಾಲಯದ ರಿಜಿಸ್ಟ್ರಿಗೆ ನಿರ್ದೇಶ ನೀಡಿತು.
ಈ ಪ್ರಕರಣಗಳ ತನಿಖೆಗಾಗಿ ಉ.ಪ್ರದೇಶ ಸರಕಾರವು ವಿಶೇಷ ತನಿಖಾ ತಂಡ (ಸಿಟ್)ವನ್ನು ರಚಿಸಿರುವುದನ್ನೂ ಝುಬೈರ್ ತನ್ನ ಅರ್ಜಿಯಲ್ಲಿ ಪ್ರಶ್ನಿಸಿದ್ದಾರೆ. ಉ.ಪ್ರದೇಶ ಪೊಲೀಸರು ದಾಖಲಿಸಿಕೊಂಡು,ತನಿಖೆಗಾಗಿ ಸಿಟ್ಗೆ ವರ್ಗಾಯಿಸಿರುವ ಎಲ್ಲ ಎಫ್ಐಆರ್ಗಳು ದಿಲ್ಲಿ ಪೊಲೀಸರ ವಿಶೇಷ ಘಟಕವು ತನಿಖೆ ನಡೆಸುತ್ತಿರುವ ಎಫ್ಐಆರ್ನ ವಸ್ತು ವಿಷಯವಾಗಿವೆ ಎಂದು ಝುಬೈರ್ ತನ್ನ ಅರ್ಜಿಯಲ್ಲಿ ಹೇಳಿದ್ದಾರೆ.