ಮಹಾತ್ಮಾ ಗಾಂಧಿ ಸ್ಮೃತಿ ಹೊರತರುವ ನಿಯತಕಾಲಿಕದ ವಿಶೇಷ ಸಂಚಿಕೆಯಲ್ಲಿ ಸಾವರ್ಕರ್ ಕುರಿತ ಮುಖಪುಟ ಲೇಖನ

Update: 2022-07-18 14:50 GMT
Photo: Thehindu.com

ಹೊಸದಿಲ್ಲಿ: ಮಹಾತ್ಮ ಗಾಂಧಿ ಸ್ಮಾರಕ ಹೊರತರುವ ಹಿಂದಿ ಭಾಷೆಯ ನಿಯತಕಾಲಿಕ `ಅಂತಿಮ್ ಜನ್' ಇದರ ಜೂನ್ ತಿಂಗಳ ವಿಶೇಷ ಸಂಚಿಕೆಯ ಮುಖಪುಟ ಲೇಖನವು ಹಿಂದುತ್ವ ನಾಯಕ ವಿನಾಯಕ್ ದಾಮೋದರ್ ಸಾವರ್ಕರ್ ಅವರಿಗೆ ಮೀಸಲಾಗಿದೆ.  ಗಾಂಧಿ ಸ್ಮೃತಿ ಮತ್ತು ದರ್ಶನ್ ಸಮಿತಿ ಈ ನಿಯತಕಾಲಿಕವನ್ನು ಹೊರತರುತ್ತಿವೆ. ಗಾಂಧಿ ಅವರ ಸ್ಮರಣಾರ್ಥ ಹೊರತರಲಾಗುವ ಈ ನಿಯತಕಾಲಿಕದಲ್ಲಿ ಹಿಂದುತ್ವ ನಾಯಕನ ಕುರಿತ ಮುಖಪುಟ ಲೇಖನ ಗಾಂಧೀವಾದಿಗಳು ಹಾಗೂ ವಿಪಕ್ಷ ನಾಯಕರುಗಳ ಕೆಂಗಣ್ಣಿಗೆ ಗುರಿಯಾಗಿದೆ.

ಈ ಸಂಚಿಕೆಯಲ್ಲಿ  ಹಿಂದುತ್ವದ ಬಗ್ಗೆ ಸಾರ್ವರ್ಕರ್ ಅವರ ಅಭಿಪ್ರಾಯ ಹಾಗೂ ದಿವಂಗತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಸಾರ್ವರ್ಕರ್ ಅವರ ಬಗ್ಗೆ ಆಡಿರುವ ಮಾತುಗಳ ಕುರಿತ ಲೇಖನವಿದೆ. ಸಾರ್ವರ್ಕರ್ ಅವರ ಕೃತಿ ಹಿಂದುತ್ವವನ್ನು ಆಧರಿಸಿ ಅದೇ ಶೀರ್ಷಿಕೆಯ ಲೇಖನವೂ ಈ ಸಂಚಿಕೆಯಲ್ಲಿದೆ. ಇತರ ಲೇಖಕರು ಸಾರ್ವರ್ಕರ್ ಅವರ ಬಗ್ಗೆ ಬರೆದಿರುವ ʼದೇಶಭಕ್ತ್ ಸಾರ್ವರ್ಕರ್,ʼ ʼವೀರ್ ಸಾರ್ವರ್ಕರ್ ಮತ್ತು ಮಹಾತ್ಮ ಗಾಂಧಿ' ಲೇಖನಗಳೂ ಪ್ರಕಟಗೊಂಡಿವೆ. ನಿಯತಕಾಲಿಕದ ಸಂಪಾದಕ ಪ್ರವೀಣ್ ದತ್ತ್ ಶರ್ಮ ಅವರ ʼಗಾಂಧಿ ಕಾ ಗುಸ್ಸಾ' ಲೇಖನವೂ ಇದರಲ್ಲಿದೆ.

ಮೇ 28 ರಂದು ಸಾರ್ವರ್ಕರ್ ಅವರ ಜನ್ಮದಿನಾಚರಣೆಯಾಗಿರುವುದರಿಂದ ಈ ಬಾರಿ ಈ ಸಂಚಿಕೆಯಲ್ಲಿ ಅವರ ವಿಚಾರ ಪ್ರಕಟಿಸಲಾಗಿದೆ ಎಂದು ಗಾಂಧಿ ಸಮಿತಿ ದರ್ಶನ್ ಸಮಿತಿ ಉಪಾಧ್ಯಕ್ಷ ವಿಜಯ್ ಗೋಯೆಲ್ ಹೇಳಿದ್ದಾರೆ.

"ವೀರ್ ಸಾರ್ವರ್ಕರ್ ಒಬ್ಬ ಮಹಾನ್ ವ್ಯಕ್ತಿ, ಅಂತೆಯೇ ಗಾಂಧೀಜಿ ಮತ್ತು ಪಟೇಲ್ ಮಹಾನ್ ವ್ಯಕ್ತಿಗಳಾಗಿದ್ದರು ಅವರ ಬಗ್ಗೆ ನಾವು ತಿಳಿಯಬೇಕು. ಬ್ರಿಟಿಷರ ಆಡಳಿತದಲ್ಲಿ ಸಾರ್ವರ್ಕರ್ ಅವರಷ್ಟು ಸಮಯ ಯಾರೂ ಜೈಲಿನಲ್ಲಿ ಕಳೆದಿರಲಿಲ್ಲ"‌ ಎಂದು ಅವರು ಹೇಳಿದ್ದಾರೆ.

ಈ ಗಾಂಧಿ ಸ್ಮೃತಿ ದರ್ಶನ್ ಸಮಿತಿಯ ಅಧ್ಯಕ್ಷರಾಗಿ ಪ್ರಧಾನಿ ನರೇಂದ್ರ ಮೋದಿ ಕಾರ್ಯನಿರ್ವಹಿಸುತ್ತಿದ್ದಾರೆ ಹಾಗೂ ಇದೇ ಸಮಿತಿಯು ತೀಸ್ ಜನವರಿ ಮಾರ್ಗ್ ನಲ್ಲಿರುವ ಗಾಂಧಿ ಸ್ಮಾರಕದ ಉಸ್ತುವಾರಿ ಹೊಂದಿದೆ. "ಈಗಿನ ಆಡಳಿತ ಗಾಂಧಿ ಸಂಸ್ಥೆಗಳ ನಿಯಂತ್ರಣ ಹೊಂದಿರುವಾಗ ಇಂತಹ ಇನ್ನಷ್ಟು ನಡೆಯಲಿವೆ. ಗಾಂಧಿ ಸಿದ್ಧಾಂತವನ್ನು ರಾಜಕೀಯ ಸಿದ್ಧಾಂತ ಹಿಂದಿಕ್ಕುವ ಅಪಾಯ ಇದಾಗಿದೆ" ಎಂದು ಮಹಾತ್ಮ ಗಾಂಧಿ ಅವರ ಮರಿಮೊಮ್ಮಗ ತುಷಾರ್ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

"ಸಾರ್ವರ್ಕರ್ ಅವರನ್ನು ವೈಭವೀಕರಿಸಲಾಗುತ್ತಿದೆ, ಇದು ಆರೆಸ್ಸೆಸ್ ಅಜೆಂಡಾ ಗಾಂಧಿ ಸ್ಮೃತಿಯಂತಹ ಸಂಸ್ಥೆಯನ್ನು ಗೌಣವಾಗಿಸಲು ಕೇಂದ್ರ ಯತ್ನಿಸುತ್ತಿದೆ" ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News