ಬಾಬರಿ ಮಸೀದಿ ಧ್ವಂಸ ಪ್ರಕರಣ: ಪುನರ್‌ಪರಿಶೀಲನಾ ಅರ್ಜಿ ಸ್ವೀಕಾರಾರ್ಹವಲ್ಲ ಎಂದ ಹೈಕೋರ್ಟ್
ಲಕ್ನೋ,ಜು.18: ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಮಾಜಿ ಉಪಪ್ರಧಾನಿ ಎಲ್.ಕೆ.ಆಡ್ವಾಣಿ, ಆಗಿನ ಉ.ಪ್ರ.ಮುಖ್ಯಮಂತ್ರಿ ಕಲ್ಯಾಣ ಸಿಂಗ್, ಹಿರಿಯ ಬಿಜೆಪಿ ನಾಯಕರಾದ ಎಂ.ಎಂ.ಜೋಶಿ, ಉಮಾ ಭಾರತಿ, ವಿನಯ ಕಟಿಯಾರ್, ಸಾಧ್ವಿ ರಿತಂಬರಾ ಮತ್ತು ಬೃಜಮೋಹನ ಸಿಂಗ್ ಸೇರಿದಂತೆ ಎಲ್ಲ 32 ಆರೋಪಿಗಳ ಖುಲಾಸೆಯ ವಿರುದ್ಧ ಪುನರ್ಪರಿಶೀಲನಾ ಅರ್ಜಿಯು ಅಂಗೀಕಾರಾರ್ಹವಲ್ಲ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯದ ಲಕ್ನೋ ಪೀಠವು ಸೋಮವಾರ ಹೇಳಿದೆ.
ಪುನರ್ಪರಿಶೀಲನಾ ಅರ್ಜಿಯನ್ನು ಕ್ರಿಮಿನಲ್ ಮೇಲ್ಮನವಿಯನ್ನಾಗಿ ಪರಿವರ್ತಿಸಿ ಸಲ್ಲಿಸುವಂತೆ ಅದು ತನ್ನ ಕಚೇರಿಗೆ ನಿರ್ದೇಶ ನೀಡಿದೆ. ನ್ಯಾಯಾಲಯವು ಆ.1ಕ್ಕೆ ಮುಂದಿನ ವಿಚಾರಣೆಯನ್ನು ನಿಗದಿಗೊಳಿಸಿದೆ.
ನ್ಯಾ.ದಿನೇಶ್ ಕುಮಾರ ಸಿಂಗ್ ಅವರ ಪೀಠವು ಈ ಆದೇಶವನ್ನು ಹೊರಡಿಸಿದೆ. ಈ ಮೊದಲು ವಿಚಾರಣೆಯು ಜು.11ಕ್ಕೆ ನಿಗದಿಗೊಂಡಿತ್ತು,ಆದರೆ ಅರ್ಜಿದಾರರ ಪರ ವಕೀಲರು ವಿಚಾರಣೆಯನ್ನು ಮುಂದೂಡುವಂತೆ ಕೋರಿದ್ದರು. ಇದಕ್ಕೆ ಪೀಠವು ಒಪ್ಪಿಕೊಂಡು ಸೋಮವಾರ ವಿಚಾರಣೆಯನ್ನು ನಿಗದಿ ಪಡಿಸಿತ್ತಾದರೂ ಮತ್ತೆ ಮುಂದೂಡುವುದಿಲ್ಲ ಎಂದು ಎಚ್ಚರಿಕೆಯನ್ನು ನೀಡಿತ್ತು.
ಅಯೋಧ್ಯೆ ನಿವಾಸಿಗಳಾದ ಹಾಜಿ ಮಹಮೂದ್ ಅಹ್ಮದ್ ಮತ್ತು ಸೈಯದ್ ಅಖಲಾಖ್ ಅಹ್ಮದ್ ಅವರು ಈ ಅರ್ಜಿಯನ್ನು ಸಲ್ಲಿಸಿದ್ದು, ತಾವು ಆರೋಪಿಗಳ ವಿರುದ್ಧ ವಿಚಾರಣೆಯಲ್ಲಿ ಸಾಕ್ಷಿಗಳಾಗಿದ್ದೆವು ಮತ್ತು ವಿವಾದಿತ ಕಟ್ಟಡದ ಧ್ವಂಸದಿಂದಾಗಿ ಸಂತ್ರಸ್ತರಾಗಿದ್ದೇವೆ ಎಂದು ಆರೋಪಿಸಿದ್ದಾರೆ.
1992,ಡಿ.6ರಂದು ಕರಸೇವಕರು ಅಯೋಧ್ಯೆಯ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ್ದರು. ಸುದೀರ್ಘ ಕಾನೂನು ಸಮರದ ಬಳಿಕ 2020,ಸೆ.30ರಂದು ಕ್ರಿಮಿನಲ್ ವಿಚಾರಣೆಯ ತೀರ್ಪು ಪ್ರಕಟಿಸಿದ್ದ ವಿಶೇಷ ಸಿಬಿಐ ನ್ಯಾಯಾಲಯವು ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿತ್ತು.