ಉಕ್ರೇನ್‌ನ ಕ್ಷಿಪಣಿ ದಾಸ್ತಾನು ಧ್ವಂಸಕ್ಕೆ ರಶ್ಯ ರಕ್ಷಣಾ ಸಚಿವರ ಆದೇಶ

Update: 2022-07-18 16:58 GMT

ಮಾಸ್ಕೊ, ಜು.18: ಉಕ್ರೇನ್‌ನ ದೀರ್ಘ ಶ್ರೇಣಿಯ ಕ್ಷಿಪಣಿ ಮತ್ತು ಫಿರಂಗಿ ಶಸ್ತ್ರಾಸ್ತ್ರಗಳನ್ನು ನಾಶ ಮಾಡಲು ಆದ್ಯತೆ ನೀಡುವಂತೆ ಸೇನೆಗೆ ರಶ್ಯಾದ ರಕ್ಷಣಾ ಸಚಿವರು ಆದೇಶಿಸಿದ್ದಾರೆ. ಪಾಶ್ಚಿಮಾತ್ಯ ದೇಶಗಳು ಉಕ್ರೇನ್‌ಗೆ ಒದಗಿಸಿದ ಶಸ್ತ್ರಾಸ್ತ್ರಗಳನ್ನು ಆ ದೇಶ ರಶ್ಯದ ಸರಬರಾಜು ಮಾರ್ಗದ ಮೇಲೆ ದಾಳಿಗೆ ಬಳಸಿರುವುದರಿಂದ ಈ ಕ್ರಮ ಅನಿವಾರ್ಯವಾಗಿದೆ ಎಂದು ರಶ್ಯದ ರಕ್ಷಣಾ ಸಚಿವ ಸೆರ್ಗೆಯ್ ಶೊಯಿಗು ಪ್ರತಿಪಾದಿಸಿದ್ದಾರೆ.

ಸುಮಾರು 5 ತಿಂಗಳ ಸಂಘರ್ಷದ ಬಳಿಕ ಈಗ ಡೊನ್ಬಾಸ್ ವಲಯದಲ್ಲಿ ಗಮನಾರ್ಹ ಮುನ್ನಡೆ ಸಾಧಿಸಿರುವ ರಶ್ಯದ ಪಡೆ ಉಕ್ರೇನ್‌ನ 5ನೇ ಒಂದರಷ್ಟು ಭೂಪ್ರದೇಶದ ಮೇಲೆ ನಿಯಂತ್ರಣ ಸಾಧಿಸಿದೆ ಎಂದು ವರದಿಯಾಗಿದೆ. ಡೊನ್ಬಾಸ್ ವಲಯದಲ್ಲಿ ತನ್ನ ನಿಯಂತ್ರಣದಲ್ಲಿರುವ ಪ್ರದೇಶದಲ್ಲಿ ಉಕ್ರೇನ್ ಪಡೆ ಜನವಸತಿ ಪ್ರದೇಶವನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸುತ್ತಿದ್ದು ಇದಕ್ಕೆ ಪಾಶ್ಚಿಮಾತ್ಯರು ಒದಗಿಸಿರುವ ಶಸ್ತ್ರಾಸ್ತ್ರಗಳನ್ನು ಬಳಸಲಾಗಿದೆ. ಅಲ್ಲದೆ ಅಲ್ಲಿರುವ ಗೋಧಿ ಮತ್ತು ಧಾನ್ಯಗಳ ಗೋದಾಮಿಗೆ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿದೆ ಎಂದು ರಕ್ಷಣಾ ಇಲಾಖೆ ಆರೋಪಿಸಿದೆ.

ಅಮೆರಿಕ ಮತ್ತದರ ಮಿತ್ರದೇಶಗಳು ಉಕ್ರೇನ್‌ಗೆ ಕೋಟ್ಯಾಂತರ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಒದಗಿಸಿದ್ದು ದೀರ್ಘವ್ಯಾಪ್ತಿಯ ಕ್ಷಿಪಣಿಗಳೂ ಇದರಲ್ಲಿ ಸೇರಿದೆ.
 ಇದನ್ನು ಬಳಸಿ ರಶ್ಯದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ 30 ದಾಸ್ತಾನು ಕೇಂದ್ರಗಳ ಮೇಲೆ ದಾಳಿ ನಡೆಸಿರುವುದಾಗಿ ಉಕ್ರೇನ್ ಹೇಳಿದೆ. ಪೂರ್ವ ಉಕ್ರೇನ್‌ನಲ್ಲಿ ಪ್ರತ್ಯೇಕತಾವಾದಿಗಳ ನಿಯಂತ್ರಣದಲ್ಲಿರುವ ಡೊನೆಟ್ಸ್ಕ್ ನಗರದ ಮೇಲೆ ಉಕ್ರೇನ್ ಸೇನೆ ನಡೆಸಿದ ಬಾಂಬ್ ದಾಳಿಯಲ್ಲಿ ಬಸ್ಸು ನಿಲ್ದಾಣ ಧ್ವಂಸವಾಗಿದ್ದು ಇಬ್ಬರು ಮೃತಪಟ್ಟಿದ್ದಾರೆ ಎಂದು ಪ್ರತ್ಯೇಕತಾವಾದಿಗಳ ಮುಖಂಡ ಡೆನಿಸ್ ಪುಷ್ಲಿನ್ ಹೇಳಿದ್ದಾರೆ. 


ಆದರೆ ಇದನ್ನು ನಿರಾಕರಿಸಿರುವ ಉಕ್ರೇನ್‌ನ ಆಂತರಿಕ ವ್ಯವಹಾರಗಳ ಇಲಾಖೆಯ ಸಲಹೆಗಾರ ಆ್ಯಂಟನ್ ಹೆರಷೆಂಕೊ, ರಶ್ಯ ನಡೆಸಿದ ದಾಳಿಗೆ ಉಕ್ರೇನ್ ಅನ್ನು ದೂಷಿಸಲಾಗುತ್ತಿದೆ ಎಂದಿದ್ದಾರೆ. ಪೂರ್ವ ಉಕ್ರೇನ್‌ನ ಟಾರೆಟ್ಸ್ಕ್ ನಗರದ ಮೇಲೆ ರಶ್ಯ ನಡೆಸಿದ ವಾಯುದಾಳಿಯಲ್ಲಿ 6 ಮಂದಿ ಮೃತಪಟ್ಟಿದ್ದಾರೆ ಎಂದು ತುರ್ತು ಸೇವಾ ವಿಭಾಗದ ಕಾರ್ಯಕರ್ತರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News