ಉಕ್ರೇನ್ ಧಾನ್ಯಕ್ಕೆ ರಶ್ಯಾದ ದಿಗ್ಬಂಧನದಿಂದ ಸಾವಿರಾರು ಮಂದಿ ಹಸಿವಿನಿಂದ ಸಾಯಬಹುದು: ಇಯು ಎಚ್ಚರಿಕೆ‌

Update: 2022-07-18 17:04 GMT
PTI

ಬ್ರಸೆಲ್ಸ್, ಜು.18: ಉಕ್ರೇನ್‌ನ ಬಂದರುಗಳಿಗೆ ರಶ್ಯಾದ ದಿಗ್ಬಂಧನವು ಹಸಿವಿನಿಂದ ಬಳಲುತ್ತಿರುವ ಸಾವಿರಾರು ಜನರಿಗೆ ಧಾನ್ಯ ಪೂರೈಕೆಗೆ ಬೆದರಿಕೆ ಒಡ್ಡಿದೆ ಎಂದು ಯುರೋಪಿಯನ್ ಯೂನಿಯನ್ (ಇಯು) ವಿದೇಶಿ ಕಾರ್ಯನೀತಿ ವಿಭಾಗದ ಮುಖ್ಯಸ್ಥ ಜೋಸೆಫ್ ಬೊರೆಲ್ ಎಚ್ಚರಿಸಿದ್ದಾರೆ.

 
   
  
ಇದು ಹಲವರಿಗೆ ಬದುಕು ಮತ್ತು ಸಾವಿನ ವಿಷಯವಾಗಿದೆ. ರಶ್ಯ ದಿಗ್ಬಂಧನ ತೆರವುಗೊಳಿಸಿ ಉಕ್ರೇನ್‌ನ ಧಾನ್ಯ ರಫ್ತಿಗೆ ಅವಕಾಶ ಮಾಡಿಕೊಡಬೇಕು ಎಂದು ಸುದ್ಧಿಗೋಷ್ಟಿಯಲ್ಲಿ ಬೊರೆಲ್ ಆಗ್ರಹಿಸಿದ್ದಾರೆ. 

ಉಕ್ರೇನ್‌ನ ಬಂದರಿನ ಮೇಲಿನ ದಿಗ್ಬಂಧನವನ್ನು ಅಂತ್ಯಗೊಳಿಸುವ ಒಪ್ಪಂದ ರೂಪಿಸುವ ನಿಟ್ಟಿನಲ್ಲಿ ರಶ್ಯ ಮತ್ತು ಉಕ್ರೇನ್ ಸಂಧಾನಕಾರರು ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ವಿಶ್ವಸಂಸ್ಥೆ ಮತ್ತು ಟರ್ಕಿಯ ನಿಯೋಗದ ಜತೆ ಬುಧವಾರ ಮಾತುಕತೆ ನಡೆಸಲಿದ್ದಾರೆ. ಫೆಬ್ರವರಿಯಲ್ಲಿ ಉಕ್ರೇನ್ ಮೇಲೆ ಆಕ್ರಮಣ ಆರಂಭಿಸಿದ ಬಳಿಕ ರಶ್ಯವು ಉಕ್ರೇನ್‌ನ ಪ್ರಮುಖ ಆಹಾರಧಾನ್ಯ ರಫ್ತಿನ ಕೇಂದ್ರವಾಗಿರುವ ಒಡೆಸಾ ಬಂದರು ಸಹಿತ ಕಪ್ಪುಸಮುದ್ರದ ಹಲವು ಬಂದರುಗಳನ್ನು ವಶಪಡಿಸಿಕೊಂಡು ಆಹಾರ ಧಾನ್ಯದ ರಫ್ತಿಗೆ ತಡೆಯೊಡ್ಡಿದೆ.
 
ರಶ್ಯದ ಆಕ್ರಮಣವನ್ನು ತಡೆಯಲು ತನ್ನ ಕೆಲವು ಬಂದರುಗಳ ಮಾರ್ಗವನ್ನು ಉಕ್ರೇನ್ ತಡೆಹಿಡಿದಿದೆ. ವಿಶ್ವದ ಧಾನ್ಯದ ಬಾಸ್ಕೆಟ್ ಎಂದು ಕರೆಸಿಕೊಳ್ಳುವ ಉಕ್ರೇನ್ ವಿಶ್ವಕ್ಕೆ , ಅದರಲ್ಲೂ ಮುಖ್ಯವಾಗಿ ಮಧ್ಯಪ್ರಾಚ್ಯ ಮತ್ತು ಆಫ್ರಿಕಾ ದೇಶಗಳಿಗೆ ಪ್ರಮುಖ ಧಾನ್ಯ ಪೂರೈಕೆದಾರನಾಗಿದೆ. ವಿಶ್ವದ ಹಲವು ದೇಶಗಳಲ್ಲಿ ಆಹಾರದ ಕೊರತೆಯಿರುವುದು ಆತಂಕಕಾರಿ ವಿಷಯವಾಗಿದೆ ಮತ್ತು ಉಕ್ರೇನ್‌ನಿಂದ ಆಹಾರ ರಫ್ತಿಗೆ ರಶ್ಯ ತಡೆಯೊಡ್ಡಿರುವುದು ಆಹಾರದ ಕೊರತೆಗೆ ಕಾರಣವಾಗಿದೆ ಎಂದು ಬೊರೆಲ್ ಹೇಳಿದ್ದಾರೆ. 

ರಶ್ಯದ ಆಕ್ರಮಣವನ್ನು ವಿರೋಧಿಸಿ ವಿಧಿಸಲಾಗಿರುವ ನಿರ್ಬಂಧದಲ್ಲಿ ಇರುವ ಲೋಪದೋಷಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ನಡೆಯಲಿರುವ ಯುರೋಪಿಯನ್ ಯೂನಿಯನ್ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ಬೊರೆಲ್ ಬ್ರಸೆಲ್ಸ್‌ಗೆ ಆಗಮಿಸಿದ್ದಾರೆ. ಉಕ್ರೇನ್ ಬಂದರಿನಲ್ಲಿರುವ ತಡೆ ನಿವಾರಣೆಯ ಬಗ್ಗೆ ಈ ವಾರದಲ್ಲಿ ಟರ್ಕಿಯಲ್ಲಿ ನಡೆಯುವ ಸಭೆಯಲ್ಲಿ ಒಪ್ಪಂದಕ್ಕೆ ಬರುವ ನಿರೀಕ್ಷೆಯಿದೆ . ಇದು ಸಾವಿರಕ್ಕೂ ಅಧಿಕ ಜನರ ಬದುಕಿನ ಪ್ರಶ್ನೆಯಾಗಿದೆ. ಇದು ರಾಜತಾಂತ್ರಿಕ ಮೇಲಾಟದ ವಿಷಯವಲ್ಲ ಎಂದು ಬೊರೆಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News