×
Ad

ದೇಶದಲ್ಲಿ ಆತಂಕದ ವಾತಾವರಣ ಸೃಷ್ಠಿ: ಅಡ್ವಕೇಟ್ ತಾಹೀರ್ ಹುಸೇನ್

Update: 2022-07-18 23:25 IST

ಉಡುಪಿ, ಜು.18: ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಧ್ವನಿ ಎತ್ತಿದವರನ್ನು ವಿವಿಧ ಸೆಕ್ಷನ್ ಹಾಕಿ ಜೈಲಿಗೆ ಕಳುಹಿಸುವ ಕಾರ್ಯವನ್ನು ಮಾಡ ಲಾಗುತ್ತಿದೆ. ಇಂತಹ ಆತಂಕದ ವಾತಾವರಣದ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹೀರ್ ಹುಸೇನ್ ಆರೋಪಿಸಿದ್ದಾರೆ.

ಅಭಿವ್ಯಕ್ತಿ ಸ್ವಾತಂತ್ರ್ಯದ ಧಮನ ಮತ್ತು ಸರಕಾರಗಳ ಸರ್ವಾಧಿಕಾರಿ ಧೋರಣೆಯ ವಿರೋಧಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾ ವತಿಯಿಂದ ಅಜ್ಜರಕಾಡಿನ ಹುತಾತ್ಮ ಸ್ಮಾರಕ ಬಳಿ ಸೋಮವಾರ ಹಮ್ಮಿಕೊಳ್ಳಲಾದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನರ ಜೀವನ ವನ್ನು ನರಕಮಯವನ್ನಾಗಿಸುವ ಕೆಲಸವನ್ನು ಸರಕಾರ ಮಾಡುತ್ತಿದೆ. ಜನರ ಗಮನ ಬೇರೆಡೆ ಸೆಳೆಯುವ ನಿಟ್ಟಿನಲ್ಲಿ ಹಿಂದುಳಿದ ಸಮುದಾಯದ ವ್ಯಕ್ತಿಯೊಬ್ಬ ರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ. ಅಲ್ಲದೆ ಅವರ ಆಯ್ಕೆ ದಿನದಂದೇ ಅಗತ್ಯ ವಸ್ತುಗಳಿಗೂ ಜಿಎಸ್‌ಟಿ ವಿಧಿಸಲಾಗಿದೆ ಎಂದು ದೂರಿದರು.

ದೇಶಕ್ಕೆ ತ್ಯಾಗ ಬಲಿದಾನ ನೀಡಿದವರಿಗೆ ಪಠ್ಯ ಪುಸ್ತಕದಲ್ಲಿ ಅವಮಾನ ಮಾಡುವ ಸರಕಾರವು ಇನ್ನು ಕೂಡ ಮಕ್ಕಳಿಗೆ ಪಠ್ಯ ಪುಸ್ತಕ ವಿತರಣೆ ಮಾಡಿಲ್ಲ. ತನ್ನ ಹಠಮಾರಿ ಧೋರಣೆಯಿಂದ ಶಿಕ್ಷಣ ಇಲಾಖೆ ಮಕ್ಕಳ ಶಿಕ್ಷಣವನ್ನು ಹಾಳು ಮಾಡುತ್ತಿದೆ. ಅಲ್ಲದೆ ಶಿಕ್ಷಣ ಇಲಾಖೆಯಲ್ಲಿ ಭಾರೀ ಭ್ರಷ್ಟಾಚಾರ ತಾಂಡವಾ ಡುತ್ತಿದೆ ಎಂದು ಅವರು ದೂರಿದರು.

ಸಿಪಿಎಂ ಮುಖಂಡ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಹಿಂದೆ ಸರಕಾರ ಮತ್ತು ವಿರೋದ ಪಕ್ಷಗಳ ನಡುವೆ ಪರಸ್ಪರ ಗೌರವ ಇತ್ತು. ಈಗ ವಿರೋಧ ಪಕ್ಷಗಳಿಗೆ ಅವಕಾಶ ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾ ಮೂರ್ತಿ ಹೇಳಿದ್ದಾರೆ. ಇದು ಯಾವ ದಿಕ್ಕಿನಲ್ಲಿ ದೇಶ ಸಾಗುತ್ತಿದೆ ಎಂಬುದರ ಸೂಚನೆಯಾಗಿದೆ ಎಂದು ತಿಳಿಸಿದರು.

ಪಾರ್ಲಿಮೆಂಟಿನ ಹೊರಗಡೆ ಪ್ರತಿಭಟನೆ ಮಾಡುವಂತಿಲ್ಲ. ಒಳಗಡೆ ಮಾತನಾಡುವುದಕ್ಕೂ ಕಡಿವಾಣ ಹಾಕಲಾಗುತ್ತಿದೆ. ಸಾಹಿತಿಗಳಿಗೆ, ವಿರೋಧ ಪಕ್ಷದ ಮುಖಂಡರಿಗೆ ಬೆದರಿಕೆ ಕರೆಗಳು ಬಂದರೂ ಸರಕಾರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಒಂದು ಧರ್ಮದವರನ್ನು ಗುರಿಯಾಗಿಸಿ ದಾಳಿ ನಡೆಸಲಾಗು ತ್ತಿದೆ. ಸರಕಾರದ ಕಾರ್ಪೊರೇಟ್ ಪರ ನೀತಿಗಳ ವಿರುದ್ದ ಜನರ ಹೋರಾಟದ ದಿಕ್ಕನ್ನು ತಪ್ಪಿಸಿ ಶಾಶ್ವತ ಅಧಿಕಾರದಲ್ಲಿರಲು ಈ ರೀತಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿಯ ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಉದ್ಯಾವರ, ಇದ್ರಿಸ್ ಹೂಡೆ ಮಾತನಾಡಿದರು. ವೆಲ್ಫೇರ್ ಪಾರ್ಟಿಯ ರಾಜ್ಯ ಕಾರ್ಯದರ್ಶಿ ಅಬ್ದುಲ್ ಅಝೀಝ್ ಜಾಗೀರ್, ಉಪಾಧ್ಯಕ್ಷ ಶಹಜಾನ್, ರಾಜ್ಯ ಕಮಿಟಿ ಸದಸ್ಯರಾದ ಅನ್ವರ್ ಅಲಿ ಕಾಪು, ಅಬ್ದುಲ್ ಕಾದೀರ್ ಮೊಯ್ದಿನ್, ಗ್ರಾ.ಪಂ ಸದಸ್ಯರಾದ ಜಮೀಲಾ ಸದೀದಾ, ರಝಾಕ್ ಬೆಂಗ್ರೆ, ಅಬ್ದುಲ್ ರಝಾಕ್ ನಕ್ವಾ, ಅಫ್ವಾನ್ ಹೂಡೆ, ಮುಹಮ್ಮದಾಲಿ ಕಾಪು ಮೊದ ಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News