ಬೆಲೆ ಏರಿಕೆ ಮಾಡಿ ಸಾರ್ವಜನಿಕರ ಬದುಕು ನರಕವನ್ನಾಗಿಸುತ್ತಿರುವ ಸರ್ಕಾರ: ತಾಹಿರ್ ಹುಸೇನ್ ಆರೋಪ

Update: 2022-07-18 18:09 GMT

ಭಟ್ಕಳ: ಇಂದು ದೇಶದಲ್ಲಿ ನಡೆಯುತ್ತಿರುವ ರಾಷ್ಟçಪತಿ ಚುನವಣೆಯ ನಡುವೆಯೂ ಕೇಂದ್ರ ಸರ್ಕಾರ ಅಗತ್ಯ ವಸ್ತುಗಳಾದ ಹಾಲು, ಮೊಸರು ಮಜ್ಜಿಗೆ ಮೇಲೆ ಜಿಎಸ್ಟಿ ನಿಗದಿಗೊಳಿಸಿ ಬೆಲೆ ಏರಿಕೆಯನ್ನು ಮಾಡಿದ್ದು, ಸಾರ್ವಜನಿಕರ ಬದುಕನ್ನು ನರಕವನ್ನಾಗಿಸುತ್ತಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷ ತಾಹೀರ್ ಹುಸೇನ್ ಆರೋಪಿಸಿದರು. 

ಅವರು ಸೋಮವಾರ ಇಲ್ಲಿನ ನವಾಯತ್ ಕಾಲೋನಿಯಲ್ಲಿರುವ ವೆಲ್ಫೇರ್ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. 

ಈಗಾಗಲೆ ಪೆಟ್ರೋಲ್,ಡಿಸೇಲ್ ಮತ್ತಿತರ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಕಂಗಾಲಾಗಿರುವ ದೇಶದ ಜನತೆಗೆ ಈಗ ಸರ್ಕಾರ ಅಗತ್ಯ ವಸ್ತುಗಳ ಸೇವೆಯನ್ನು ಜಿ.ಎಸ್.ಟಿ ವ್ಯಾಪ್ತಿಗೆ ತಂದು ಅವುಗಳ ಬೆಲೆಯು ಏರುವಂತೆ ಮಾಡಿದ್ದು ಇದು ಜನಹಿತ ಕಾಪಾಡುವ ಸರ್ಕಾರವೋ ಅಥವಾ ಜನರನ್ನು ನರಕಕ್ಕೆ ತಳ್ಳುವ ಸರ್ಕಾರವೋ ಎಂದು ಪ್ರಶ್ನಿಸಿದ್ದು ಆರ್ಥಿಕತೆ ಸುಧಾರಣೆಯ ಹೆಸರಲ್ಲಿ ಸರ್ಕಾರ ಜನರ ಬದುಕಿನ ಮೇಲೆ ಪ್ರಹಾರ ನಡೆಸುತ್ತಿರುವುದು ಅತ್ಯಂತ ಖಂಡನೀಯ ಎಂದರು. 

ಭಟ್ಕಳದಲ್ಲಿ ಕಳೆದ 120 ದಿನಗಳಿಂದ ತಮ್ಮ ನ್ಯಾಯುತ ಬೇಡಿಕೆಗಳನ್ನು ಈಡೇರಿಸಲು ಧರಣಿ ಕುಳಿತ ಮೊಗೇರ ಸಮುದಾಯದ ಸಮಸ್ಯೆಗಳನ್ನು ಬಗೆ ಹರಿಸಲು ಸಾಧ್ಯವಾಗದ ಉ.ಕ ಜಿಲ್ಲೆಯ 5 ಶಾಸಕರು, ಓರ್ವ ಸಂಸದ ಮತ್ತೊಬ್ಬ ಮಂತ್ರಿ ಇದ್ದೂ ಇಲ್ಲದಂತಾಗಿದ್ದಾರೆ.

ಪಕ್ಕದ ಉಡುಪಿ ಜಿಲ್ಲೆಗೆ ಬಂದ ಮುಖ್ಯಮಂತ್ರಿಗಳು ಮೊಗೇರ ಸಮುದಾಯದ ಬೇಡಿಕೆಗಳನ್ನು ಎದುರಿಸಲಾಗದೆ ಹಿಂತಿರುಗಿ ಹೋಗಿದ್ದಾರೆ ಅಂದರೆ ಇಲ್ಲಿನ ಬಿಜೆಪಿ ಶಾಸಕರು, ಸಂಸದರು ಏನು ಮಾಡುತ್ತಿದ್ದಾರೆ ಎಂದು ಅವರು ಪ್ರಶ್ನಿಸಿದ್ದು ಮುಖ್ಯಮಂತ್ರಿಗಳು ಕೂಡಲೆ ಮೊಗೇರ ಸಮುದಾಯಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ನಾವು ಭೇಟಿ ನೀಡಿದ್ದು ಜಿಲ್ಲಾಡಳಿತವು ಸಂತೃಸ್ತರಿಗೆ ಪರಿಹಾರ ಒದಗಿಸಿಕೊಡುವಲ್ಲಿ ವಿಫಲವಾಗಿದೆ. ಇಲ್ಲಿನ ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಶಾಸಕರು ಇದಕ್ಕಾಗಿ ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಪ್ರತಿ ವರ್ಷವೂ ಇಲ್ಲಿನ ಜನರು ಪ್ರಕೃತಿ ವಿಕೋಪಕ್ಕೆ ಬಲಿಯಾಗುತ್ತಿದ್ದಾರೆ. ಒಂದಿಷ್ಟು ಜಾಗೃತೆ ವಹಿಸಿ ಮುಂಚೆಯೇ ಕ್ರಮಕೈಗೊಂಡರೆ ಸಾಕಾಷ್ಟು ಅನಾಹುತಗಳನ್ನು ತಡೆಯಬಹುದು. ಆದರೆ ಇಲ್ಲಿನ ಶಾಸಕರು, ಮಂತ್ರಿಗಳು, ಆಡಳಿತ ಎಲ್ಲರ ನಿರ್ಲಕ್ಷತನದಿಂದಾಗಿ ಹಲವು ಮನೆಗಳಿಗೆ ನೀರು ನುಗ್ಗಿದೆ. ಅವರಿಗೆ ತಾತ್ಕಾಲಿಕ ಪರಿಹಾರದ ಅಗತ್ಯವಿಲ್ಲ. ಶಾಶ್ವತವಾದ ಪರಿಹಾರವನ್ನು ಸರ್ಕಾರ ಮಾಡಿಕೊಡಬೇಕು ಎಂದು ಅವರು ಪತ್ರಿಕಾಗೋಷ್ಟಿಯಲ್ಲಿ ಆಗ್ರಹಿಸಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಸೀಫ್ ಶೇಖ್, ಮುಖಂಡರಾದ ಅಬ್ದುಲ್ ಜಬ್ಬಾರ್ ಅಸದಿ ಮತ್ತು ಸಯ್ಯದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News