ಲುಲು ಮಾಲ್‍ನಲ್ಲಿ ನಮಾಝ್ ಸಲ್ಲಿಸಿದ್ದಕ್ಕೆ ಮೂವರು ಹಿಂದೂಗಳನ್ನು ಬಂಧಿಸಲಾಗಿಲ್ಲ: ಪೊಲೀಸರ ಸ್ಪಷ್ಟನೆ

Update: 2022-07-19 07:08 GMT

ಲಕ್ನೊ: ನಗರದಲ್ಲಿ ಹೊಸದಾಗಿ ಉದ್ಘಾಟನೆಗೊಂಡಿರುವ ಲುಲು ಮಾಲ್‍ನಲ್ಲಿ ಇತ್ತೀಚೆಗೆ ಮೂವರು ಹಿಂದುತ್ವ ಸಂಘಟನೆಗೆ ಸೇರಿದ ವ್ಯಕ್ತಿಗಳು ಮುಸ್ಲಿಮರಂತೆ ಸೋಗು ಹಾಕಿ ನಮಾಜ್ ಸಲ್ಲಿಸಿದ್ದರು ಎಂಬ ಸಾಮಾಜಿಕ ಜಾಲತಾಣ ಸುದ್ದಿಗಳನ್ನು ಲಕ್ನೋ ಪೊಲೀಸರು ನಿರಾಕರಿಸಿದ್ದಾರೆ ಹಾಗೂ ಇದನ್ನೊಂದು ಸಂಚಿನ ಭಾಗವೆಂದು ವಿವರಿಸಿದ್ದಾರೆ ಎಂದು boomlive ವರದಿ ಮಾಡಿದೆ.

ವಾಸ್ತವವಾಗಿ ಈ ಮೂವರು ವ್ಯಕ್ತಿಗಳು ಜುಲೈ 15, 2022ರಂದು ಹನುಮಾನ್ ಚಾಲಿಸಾ ಪಠಿಸಲು ಯತ್ನಿಸಿದ್ದಕ್ಕೆ ಪೊಲೀಸರು ವಶಪಡಿಸಿಕೊಂಡವರಾಗಿದ್ದು ಹಾಗೂ ಜುಲೈ 12ರಂದು ಮಾಲ್‍ನಲ್ಲಿ ನಮಾಜ್ ಸಲ್ಲಿಸುವ ವೀಡಿಯೋದಲ್ಲಿ ಕಾಣಿಸಿಕೊಂಡವರಲ್ಲ ಎಂದು ತನ್ನ ಸತ್ಯಶೋಧನಾ ವರದಿಯಲ್ಲಿ ತಿಳಿಸಿದೆ.

ಯುಎಇ ಮೂಲದ ಭಾರತೀಯ ಸಂಜಾತ ಉದ್ಯಮಿ ಯೂಸುಫ್ ಆಲಿ ಎಂ ಎ ಅವರ ಒಡೆತನದ ಈ ಮಾಲ್ ಉದ್ಘಾಟನೆಯಾದ ದಿನವಾದ ಜುಲೈ 12ರಂದೇ ಅದರ ಮೊದಲ ಅಂತಸ್ತಿನಲ್ಲಿ ಎಂಟು ಜನರು ನಮಾಝ್ ಸಲ್ಲಿಸುತ್ತಿರುವ ವೀಡಿಯೋ ವೈರಲ್ ಆದ ನಂತರ ವಿವಾದಕ್ಕೆ ಸಿಲುಕಿದೆ.

ನಂತರ ಮಾಲ್‍ನ ಆಡಳಿತ ಸ್ಪಷ್ಟೀಕರಣ ನೀಡಿ ವೈರಲ್ ವೀಡಿಯೋದಲ್ಲಿ ನಮಾಝ್ ಸಲ್ಲಿಸುತ್ತಿರುವವರು ಮಾಲ್ ಉದ್ಯೋಗಿಗಳಲ್ಲ ಬದಲು ಸಂದರ್ಶಕರಾಗಿದ್ದರು ಹಾಗೂ ಇಂತಹ ಘಟನೆ ಮರುಕಳಿಸದಂತೆ ಕ್ರಮಕೈಗೊಳ್ಳುವುದಾಗಿ ತಿಳಿಸಿ ಈ ಕುರಿತು ಸುಶಾಂತ್ ಗೋಲ್ಫ್ ಸಿಟಿ ಠಾಣೆಗೂ ಪತ್ರ ಕಳುಹಿಸಿತ್ತು. ಮಾಲ್ ಒಳಗೆ ಯಾವುದೇ ರೀತಿಯ ಪ್ರಾರ್ಥನೆಗಳನ್ನು ಅನುಮತಿಸಲಾಗುವುದಿಲ್ಲ ಎಂದು ಮಾಲ್ ಒಳಗೆ ನೋಟಿಸ್‍ಗಳನ್ನು ಹಾಕಲಾಗಿದೆ.

ಈ ನಡುವೆ ಮಾಲ್ ಒಳಗೆ ನಮಾಝ್ ವಿರೋಧಿಸಿ ಹಿಂದುತ್ವ ಸಂಘಟನೆಗಳು ಮಾಲ್ ಅನ್ನು ಬಹಿಷ್ಕರಿಸಬೇಕೆಂಬ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿವೆಯಲ್ಲದೆ ಪ್ರತಿಭಟನೆಯಾಗಿ ಮಾಲ್‍ನಲ್ಲಿ ಹನುಮಾನ್ ಚಾಲೀಸಾ ಪಠಿಸಲು ಅವಕಾಶವನ್ನೂ ಕೋರಿದ್ದವು. ಇದರ ಹಿನ್ನೆಲೆಯಲ್ಲಿ ಮಾಲ್‍ನ ಒಂದು ಕಡೆ ಅನುಮತಿಯಿಲ್ಲದೆ ಹನುಮಾನ್ ಚಾಲೀಸಾ ಪಠಿಸಲು ಯತ್ನಿಸಿದ್ದಕ್ಕೆ ಹಲವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.

ಜುಲೈ 15ರಂದು ಡಿಸಿಪಿ ದಕ್ಷಿಣ ಲಕ್ನೋ ಅವರ ಟ್ವಿಟ್ಟರ್ ಹ್ಯಾಂಡಲ್ ಒಬ್ಬ ಮುಸ್ಲಿಂ ಹಾಗೂ 3 ಮಂದಿ ಹಿಂದುಗಳನ್ನೊಳಗೊಂಡಂತೆ ನಾಲ್ಕು ಮಂದಿಯ ಹೆಸರುಗಳನ್ನು ಉಲ್ಲೇಖಿಸಿ ಇವರು ಲುಲು ಮಾಲ್ ಒಳಗಡೆ ಅಕ್ರಮವಾಗಿ ಧಾರ್ಮಿಕ ಚಟುವಟಿಕೆ ನಡೆಸಲು ಯತ್ನಿಸಿದ್ದಾರೆ ಹಾಗೂ ಅವರನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ಮಾಹಿತಿ ನೀಡಿದ್ದರು. ಅವರ ಹೆಸರುಗಳನ್ನು ಸರೋಜ್ ನಾಥ್ ಯೋಗಿ, ಕೃಷ್ಣ ಕುಮಾರ್ ಪಾಠಕ್, ಗೌರವ್ ಗೋಸ್ವಾಮಿ ಮತ್ತು ಅರ್ಷದ್ ಆಲಿ ಎಂದು ನೀಡಲಾಗಿತ್ತು.

ಈ ಟ್ವೀಟ್‍ನ ಸ್ಕ್ರೀನ್‍ಶಾಟ್ ನಂತರ ವೈರಲ್ ಆಗಿ ಇದರಲ್ಲಿ ಹೆಸರಿಸಲಾಗಿರುವ ಮೂವರು ಹಿಂದು ಜನರು ಮುಸ್ಲಿಮರ ವೇಷದಲ್ಲಿ ಮಾಲ್‍ನಲ್ಲಿ ನಮಾಜ್ ಸಲ್ಲಿಸಿದ್ದರು ಎಂಬರ್ಥದಲ್ಲಿ ಹಲವರು ಟ್ವೀಟ್ ಮಾಡಿದ್ದರು.

ಜುಲೈ 18ರಂದು ಲಕ್ನೋ ಪೊಲೀಸರು ಟ್ವೀಟ್ ಮೂಲಕ ಈ ಸುದ್ದಿಗಳನ್ನು ನಿರಾಕರಿಸಿದರಲ್ಲದೆ ನಮಾಜ್ ಸಲ್ಲಿಸುತ್ತಿರುವ ವೈರಲ್ ವೀಡಿಯೋದಲ್ಲಿ ಕಾಣಿಸಿಕೊಂಡ ಯಾರನ್ನೂ ಗುರುತಿಸಲಾಗಿಲ್ಲ. ಈಗಾಗಲೇ ಕಸ್ಟಡಿಯಲ್ಲಿರುವ ನಾಲ್ಕು ಮಂದಿಯಲ್ಲಿ ಮೂವರು ಹಿಂದುಗಳು ಮಾಲ್‍ನೊಳಗೆ ಬಂಧನಕ್ಕೀಡಾಗಿದ್ದರೆ ಮುಸ್ಲಿಂ ವ್ಯಕ್ತಿಯನ್ನು ಅದೇ ದಿನ, ಅಂದರೆ ಜುಲೈ 15ರಂದು ನಮಾಜ್ ಸಲ್ಲಿಸಲು ಯತ್ನಿಸಿದ್ದಕ್ಕಾಗಿ ಬಂಧಿಸಲಾಗಿದೆ ಎಂದು  ತಿಳಿಸಿದ್ದಾರೆ.

ಆದರೆ ಸಾಮಾಜಿಕ ಜಾಲತಾಣಗಳಲ್ಲಿ ನಮಾಜ್‍ನ ವೈರಲ್ ವೀಡಿಯೋ ಬಗ್ಗೆ ಹಲವಾರು ಸುದ್ದಿಗಳು ಹರಿದಾಡುತ್ತಿದ್ದು ಹಾಗೂ ಅದರಲ್ಲಿ ಕಾಣಿಸಿಕೊಂಡವರು ನಿಜವಾಗಿಯೂ ಮುಸ್ಲಿಮರಾಗಿದ್ದರೇ ಹಾಗೂ ಮುಸ್ಲಿಂ ಸಮುದಾಯವನ್ನು ಕೆಟ್ಟದ್ದಾಗಿ ಬಿಂಬಿಸಲು ಇದೊಂದು ಸಂಚಾಗಿತ್ತೇ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.

"ವೀಡಿಯೋದಲ್ಲಿ ಕಾಣಿಸಿಕೊಂಡವರಿಗೆ ನಮಾಜ್ ಹೇಗೆ ಸಲ್ಲಿಸುವುದು ಎಂಬ ಬಗ್ಗೆ ತಿಳಿದಿಲ್ಲದೇ ಇರುವಂತೆ ಕಾಣಿಸುತ್ತದೆ ಎಂದು ಹೆಚ್ಚುವರಿ ಡಿಸಿಪಿ(ದಕ್ಷಿಣ) ರಾಜೇಶ್ ಕುಮಾರ್ ಶ್ರೀವಾಸ್ತವ ಹೇಳಿದ್ದಾರೆ" ಎಂದು ಕಾಂಗ್ರೆಸ್ ಮುಖವಾಣಿ ಎಂದು ತಿಳಿಯಲಾದ ನ್ಯಾಷನಲ್ ಹೆರಾಲ್ಡ್ ವರದಿ ಮಾಡಿದೆ. ಆದರೆ ಈ ವೀಡಿಯೋದಲ್ಲಿ ಕಾಣಿಸಿಕೊಂಡವರು ಯಾರೆಂದು ಪೊಲೀಸರು ತಾವು ಇನ್ನೂ ಗುರುತಿಸಿಲ್ಲ ಎಂದು ಹೇಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News