ಅಗ್ನಿಪಥ್‌ ಯೋಜನೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದಿಲ್ಲಿ ಹೈಕೋರ್ಟ್‌ ಗೆ ವರ್ಗಾಯಿಸಿದ ಸುಪ್ರೀಂಕೋರ್ಟ್

Update: 2022-07-19 14:28 GMT

ಅಗ್ನಿಪಥ್ ಯೋಜನೆಯನ್ನು ಪ್ರಶ್ನಿಸಿರುವ ಅರ್ಜಿಗಳನ್ನು ದಿಲ್ಲಿ ಹೈಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ ಕೋರ್ಟ್ (ಅಪ್ಡೇಟ್)‌

ಹೊಸದಿಲ್ಲಿ,ಜು.19: ಅಗ್ನಿಪಥ್ ಯೋಜನೆಯನ್ನು ಪ್ರಶ್ನಿಸಿ ತನ್ನೆದುರು ಸಲ್ಲಿಸಲಾಗಿರುವ ಮೂರು ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ವರ್ಗಾಯಿಸಿದೆ. ಈ ಪೈಕಿ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಾಗಿದ್ದರೆ ಇನ್ನೊಂದು ಅರ್ಜಿಯನ್ನು 31 ವಾಯುಪಡೆ ಉದ್ಯೋಗಾಕಾಂಕ್ಷಿಗಳ ಗುಂಪೊಂದು ಸಲ್ಲಿಸಿದೆ. ಈಗಾಗಲೇ ಸಶಸ್ತ್ರ ಪಡೆಗಳಲ್ಲಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವವರಿಗೆ ಅಗ್ನಿಪಥ್ ಯೋಜನೆಯನ್ನು ಅನ್ವಯಿಸಬಾರದು ಎಂದು ಈ ಗುಂಪು ತನ್ನ ಅರ್ಜಿಯಲ್ಲಿ ಆಗ್ರಹಿಸಿದೆ.

ದಿಲ್ಲಿ,ಕೇರಳ,ಪಂಜಾಬ್ ಮತ್ತು ಹರ್ಯಾಣ,‌ ಪಾಟ್ನಾ ಹಾಗೂ ಉತ್ತರಾಖಂಡ ಉಚ್ಚ ನ್ಯಾಯಾಲಯಗಳಲ್ಲಿಯೂ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದರು. ಸರ್ವೋಚ್ಚ ನ್ಯಾಯಾಲಯದ ನಿರ್ದೇಶದ ಬಳಿಕ ದಿಲ್ಲಿ ಉಚ್ಚ ನ್ಯಾಯಾಲಯವು ಈ ಅರ್ಜಿಗಳನ್ನು ಇತರ ಅರ್ಜಿಗಳೊಂದಿಗೆ ಪಟ್ಟಿ ಮಾಡಿದ್ದು,ಬುಧವಾರ ವಿಚಾರಣೆ ನಡೆಸಲಿದೆ.
ಮಂಗಳವಾರದ ವಿಚಾರಣೆ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು ಉಚ್ಚ ನ್ಯಾಯಾಲಯಗಳ ಮುಂದೆ ಬಾಕಿಯಿರುವ ಪ್ರಕರಣಗಳನ್ನು ತನಗೆ ವರ್ಗಾಯಿಸಿಕೊಳ್ಳಲು ನಿರಾಕರಿಸಿತು.

ಹಾಗೆ ಮಾಡುವುದರಿಂದ ಹಲವಾರು ಉಚ್ಚ ನ್ಯಾಯಾಲಯಗಳಲ್ಲಿ ಎತ್ತಲಾಗಿರುವ ಯೋಜನೆಯ ಸಿಂಧುತ್ವ ಮತ್ತು ಅದರ ಅನುಷ್ಠಾನದ ಕುರಿತು ವಿವಿಧ ಅಂಶಗಳ ಬಗ್ಗೆ (ದಿಲ್ಲಿ) ಉಚ್ಚ ನ್ಯಾಯಾಲಯದ ಪರಿಗಣಿತ ದೃಷ್ಟಿಕೋನದಿಂದ ಈ ನ್ಯಾಯಾಲಯವು ವಂಚಿತವಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ಎ.ಎಸ್.ಬೋಪಣ್ಣ ಮತ್ತು ಸೂರ್ಯಕಾಂತ ಅವರ ಪೀಠವು ತಿಳಿಸಿತು.

ತಮ್ಮ ಅರ್ಜಿಗಳನ್ನು ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ವರ್ಗಾಯಿಸಲು ಅಥವಾ ಅವುಗಳನ್ನು ಬಾಕಿಯಿರಿಸಲು ಅರ್ಜಿದಾರರಿಗೆ ಆಯ್ಕೆಯನ್ನು ಒದಗಿಸುವಂತೆಯೂ ಉಚ್ಚ ನ್ಯಾಯಾಲಯಗಳಿಗೆ ನಿರ್ದೇಶ ನೀಡಿದ ಸರ್ವೋಚ್ಚ ನ್ಯಾಯಾಲಯವು,ಅರ್ಜಿಗಳನ್ನು ಬಾಕಿಯುಳಿಸಿಕೊಂಡರೆ ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಮಧ್ಯಪ್ರವೇಶಿಸಲು ಅವರಿಗೆ ಸ್ವಾತಂತ್ರವಿರಬೇಕು ಎಂದು ಸೂಚಿಸಿತು. ಅರ್ಜಿಗಳ ವಿಚಾರಣೆಯನ್ನು ತ್ವರಿತವಾಗಿ ನಡೆಸುವಂತೆ ಅದು ದಿಲ್ಲಿ ಉಚ್ಚ ನ್ಯಾಯಾಲಯವನ್ನು ಕೋರಿಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News