ಮಡಿಕೇರಿ- ಮಂಗಳೂರು ರಸ್ತೆಯಲ್ಲಿ ಘನ ವಾಹನಗಳಿಗೆ ನಿಷೇಧ

Update: 2022-07-19 07:03 GMT

ಸಂಪಾಜೆ: ಮಡಿಕೇರಿ- ಮಂಗಳೂರು ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದ ಪರ್ಯಾಯ ರಸ್ತೆಯಲ್ಲೂ ಬಿರುಕು ಕಾಣಿಸಿಕೊಂಡಿದ್ದು, ಘನ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

ಈ ಮಧ್ಯೆ ಸೋಮವಾರ ರಾತ್ರಿ ಸಂಪಾಜೆ ಗೇಟ್ ಬಳಿ ತಡೆಯಲಾಗಿದ್ದ ವಾಹನಗಳನ್ನು ಇಂದು ಬೆಳಗ್ಗೆ ಪರ್ಯಾಯ ರಸ್ತೆ ವಿರಾಜಪೇಟೆ-ಹುಣಸೂರು ಮೂಲಕ ಸಂಚರಿಸಲು ಅವಕಾಶ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾತ್ರಿಯಿಂದ ಬೆಳಗ್ಗಿನವರಗೆ ಸಂಪಾಜೆ ಗೇಟ್ ಬಳಿ ಸಾಲುಗಟ್ಟಿ ಲಾರಿ ಮತ್ತಿತರ ವಾಹನಗಳು ನಿಂತಿದ್ದವು. ಎರಡು ದಿನಗಳ ಹಿಂದೆ ಕೊಡಗು ಜಿಲ್ಲಾಧಿಕಾರಿ ಕಚೇರಿಯ ತಡೆಗೋಡೆಯ ಸ್ಲ್ಯಾಬ್‌ಗಳು ಹೊರ ಚಾಚಿದ್ದರಿಂದ ಇಲ್ಲಿ ಸಂಚಾರ ನಿಷೇಧಿಸಿ ಮಡಿಕೇರಿ–ಮೇಕೇರಿ–ಅಪ್ಪಂಗಲ–ತಾಳತ್ತಮನೆ ಮಾರ್ಗದಲ್ಲಿ ಅವಕಾಶ ಮಾಡಿಕೊಡಲಾಗಿತ್ತು. ಆದರೆ, ಸೋಮವಾರ ರಾತ್ರಿ ಮೇಕೇರಿ ಸಮೀಪ ಭಾರಿ ಗಾತ್ರದ ಬಿರುಕುಗಳು ಮೂಡಿದ್ದು, ರಸ್ತೆ ಕುಸಿಯುವ ಆತಂಕ ಮೂಡಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ರಸ್ತೆಯ ಒಂದು ಬದಿ ಮಾತ್ರ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಘನ ವಾಹನಗಳ ಸಂಚಾರವನ್ನು ನಿಷೇಧಿಸಿದ್ದಾರೆ.

ಬಿರುಕು ಬಿಟ್ಟಿರುವ ರಸ್ತೆಯಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸದ್ಯ ಘನ ವಾಹನಗಳಿಗೆ ಸಂಚರಿಸಲು ಅವಕಾಶ ನೀಡುತ್ತಿಲ್ಲ. ಕೆಎಸ್‌ಆರ್‌ಟಿಸಿಯ ಪ್ರಯಾಣಿಕ ವಾಹನಗಳಿಗೆ, ಇತರ ಲಘು ವಾಹನಗಳಿಗೆ ಅವಕಾಶ ನೀಡಲಾಗುತಿದೆ ಎಂದು ತಿಳಿದು ಬಂದಿದೆ. ಮಂಗಳೂರು- ಮಡಿಕೇರಿ ರಸ್ತೆಯಲ್ಲಿ ಘನ ವಾಹನಗಳಿಗೆ ನಿಷೇಧ ಹೇರಿ ಈ ಹಿಂದೆಯೇ ಜಿಲ್ಲಾಡಳಿತ ಆದೇಶ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News