ನಮ್ಮ ಶೇ 80ಕ್ಕೂ ಹೆಚ್ಚು ಉದ್ಯೋಗಿಗಳು ಹಿಂದುಗಳು: ವೈರಲ್ ವಿವಾದಿತ ವೀಡಿಯೋ ನಂತರ ಲುಲು ಮಾಲ್ ಹೇಳಿಕೆ

Update: 2022-07-19 09:49 GMT

 ಲಕ್ನೋ: ಉದ್ಘಾಟನೆಯಾದ ದಿನದಂದೇ ಮಾಲ್‍ನೊಳಗೆ ನಮಾಜ್ ಸಲ್ಲಿಸುವ ವೀಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ವಿವಾದಕ್ಕೀಡಾಗಿರುವ ಲಕ್ನೋದ ಲುಲು ಮಾಲ್ ಆಡಳಿತ ಇದೀಗ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿ ತನ್ನ ಶೇ 80ಕ್ಕೂ ಹೆಚ್ಚಿನ ಉದ್ಯೋಗಿಗಳು ಹಿಂದುಗಳಾಗಿದ್ದಾರೆಂಬ ಮಾಹಿತಿ ಒದಗಿಸಿದೆ ಎಂದು indianexpress.com ವರದಿ ಮಾಡಿದೆ.

ಮಾಲ್ ಆಡಳಿತ ಒಂದು ನಿರ್ದಿಷ್ಟ ಸಮುದಾಯದ ಪರ ಇದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಮಾಲ್ ಆಡಳಿತ ಹೇಳಿಕೆ ಬಿಡುಗಡೆಗೊಳಿಸಿದೆ. "ಕೆಲ ಜನರು ತಮ್ಮ ಸ್ವಹಿತಾಸಕ್ತಿಗಳಿಗಾಗಿ ನಮ್ಮ ಸಂಸ್ಥೆಯನ್ನು ಗುರಿಯಾಗಿಸಿರುವುದು ದುರಾದೃಷ್ಟಕರ. ನಮ್ಮ  ಉದ್ಯೋಗಿಗಳಲ್ಲಿ ಸ್ಥಳೀಯ ನಿವಾಸಿಗಳು, ಉತ್ತರ ಪ್ರದೇಶ ಮತ್ತು ದೇಶದ ವಿವಿಧೆಡೆಗಳವರು ಇದ್ದಾರೆ. ಇವರಲ್ಲಿ ಶೇ 80ಕ್ಕೂ ಅಧಿಕ ಮಂದಿ ಹಿಂದುಗಳಾಗಿದ್ದಾರೆ ಹಾಗೂ ಉಳಿದವರು ಮುಸ್ಲಿಮರು, ಕ್ರೈಸ್ತರು ಮತ್ತು ಇತರರು. ನಮ್ಮ ಸಂಸ್ಥೆಯ ಯಾರಿಗೂ ಯಾವುದೇ ಧಾರ್ಮಿಕ ಚಟುವಟಿಕೆಗೆ ಅವಕಾಶವಿಲ್ಲ. ಪ್ರಾರ್ಥನೆ ಮತ್ತು ನಮಾಝ್ ಅನ್ನು ಸಲ್ಲಿಸಲು ಯತ್ನಿಸಿದವರ ವಿರುದ್ಧ ಮಾಲ್‍ನ ಆಡಳಿತ ದೂರು ನೀಡಿದೆ" ಎಂದು ಹಿಂದಿಯಲ್ಲಿ ಬರೆಯಲಾದ ಹೇಳಿಕೆಯನ್ನು ಲುಲು ಇಂಡಿಯಾ ಶಾಪಿಂಗ್ ಮಾಲ್ ಪ್ರೈವೇಟ್ ಲಿಮಿಟೆಡ್ ಇದರ ಪ್ರಾದೇಶಿಕ ನಿರ್ದೇಶಕ ಜಯಕುಮಾರ್ ಗಂಗಾಧರ್ ಬಿಡುಗಡೆಗೊಳಿಸಿದ್ದಾರೆ.

"ಲುಲು ಮಾಲ್ ಒಂದು ಉದ್ಯಮ ಸಂಸ್ಥೆಯಾಗಿದ್ದು, ಯಾವುದೇ ಜಾತಿ, ಧರ್ಮವನ್ನು ಪರಿಗಣಿಸದೆ ಉದ್ಯಮ ನಡೆಸುತ್ತಿದೆ. ನಮಗೆ ಗ್ರಾಹಕರೇ ಮುಖ್ಯ. ಸರಕಾರಿ ನಿಯಮಗಳಿಗೆ ಅನುಸಾರವಾಗಿ ನಾವು ಉದ್ಯಮ ನಡೆಸುತ್ತಿದ್ದೇವೆ. ನಮ್ಮ ಉದ್ಯೋಗಿಗಳು ಇಲ್ಲಿ ಅವರ ಜಾತಿ/ಧರ್ಮಗಳ ಕಾರಣದಿಂದಾಗಿ ಇಲ್ಲ, ಬದಲು ಅವರ ಅರ್ಹತೆ ಮತ್ತು ಕಾರ್ಯತತ್ಪರತೆಯಿಂದಾಗಿ ಇದ್ದಾರೆ, ಸ್ವಹಿತಾಸಕ್ತಿಗಾಗಿ ನಮ್ಮ ಗೌರವಾನ್ವಿತ ಸಂಸ್ಥೆಯನ್ನು ಟಾರ್ಗೆಟ್ ಮಾಡಬೇಡಿ ಎಂದು ಎಲ್ಲರಿಗೂ ಮನವಿ ಮಾಡುತ್ತೇವೆ ನಮಗೆ ನಮ್ಮ ಗ್ರಾಹಕರ ಹಿತದೃಷ್ಟಿಯಿಂದ ಉದ್ಯಮ ನಡೆಸಲು ಅವಕಾಶ ಒದಗಿಸಿ" ಎಂದೂ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಲುಲು ಮಾಲ್ ಕುರಿತ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶ ಮೂಲಭೂತಸೌಕರ್ಯ ಮತ್ತು ಕೈಗಾರಿಕಾ ಅಭಿವೃದ್ಧಿ ಸಚಿವ ನಂದ ಗೋಪಾಲ್ ಗುಪ್ತ, "ಇದು ಸಮಾಜ-ವಿರೋಧಿ ಶಕ್ತಿಗಳ ಕೆಲಸ, ರಾಜ್ಯಕ್ಕೆ ಹೂಡಿಕೆಗಳನ್ನು ಆಕರ್ಷಿಸುವಲ್ಲಿ ಸರಕಾರದ ಯಶಸ್ಸನ್ನು ಅರಗಿಸಿಕೊಳ್ಳಲಾಗದವರ ಕೃತ್ಯ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News