ಕೇರಳ: ನೀಟ್ ಪ್ರವೇಶಕ್ಕಾಗಿ ವಿದ್ಯಾರ್ಥಿನಿಯ ಒಳಉಡುಪು ತೆಗೆಸಿದ ಪ್ರಕರಣ; ಎಫ್‍ಐಆರ್ ದಾಖಲು
ತಿರುವನಂತಪುರ,ಜು.19: ಕೊಲ್ಲಂ ಜಿಲ್ಲೆಯಲ್ಲಿ ಸೋಮವಾರ ನೀಟ್ ಪರೀಕ್ಷೆ ಬರೆಯಲು ಹಾಜರಾಗಿದ್ದ ಮಹಿಳಾ ಅಭ್ಯರ್ಥಿಗಳು ಬಲವಂತದಿಂದ ತಮ್ಮ ಒಳಉಡುಪನ್ನು ತೆಗೆಸಲಾಗಿತ್ತು ಎಂದು ದೂರಿಕೊಂಡಿರುವ ಹಿನ್ನೆಲೆಯಲ್ಲಿ ಕೇರಳ ಪೊಲೀಸರು ಮಂಗಳವಾರ ಐಪಿಸಿಯ 354 ಮತ್ತು 509 ಕಲಮ್ಗಳಡಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಕೊಲ್ಲಂ ಜಿಲ್ಲೆಯ ಆಯೂರ್ ಪಟ್ಟಣದಲ್ಲಿಯ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ನಡೆದಿದ್ದ ಪರೀಕ್ಷೆಗೆ ಹಾಜರಾಗಿದ್ದ ಮಹಿಳಾ ಅಭ್ಯರ್ಥಿಯ ತಂದೆಯ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಆರಂಭಿಸಲಾಗಿದ್ದು,ದೈಹಿಕ ತಪಾಸಣೆ ನಡೆಸಿದ್ದ ಆರೋಪಿಗಳನ್ನು ಶೀಘ್ರವೇ ಬಂಧಿಸುವುದಾಗಿ ತಿಳಿಸಿದ್ದಾರೆ.
ತನ್ನ ಮಗಳು ಬ್ರಾ ಇಲ್ಲದೆ ಮೂರು ಗಂಟೆಗಳ ಕಾಲ ಪರೀಕ್ಷೆ ಬರೆಯುವ ಆಘಾತಕಾರಿ ಅನುಭವಕ್ಕೆ ಒಳಗಾಗಿದ್ದಳು. ಇತರ ಮಹಿಳಾ ಅಭ್ಯರ್ಥಿಗಳೂ ಇಂತಹ ಕ್ರೌರ್ಯಕ್ಕೆ ಗುರಿಯಾಗಿದ್ದರು ಎಂದು ತಂದೆ ಸೋಮವಾರ ಮಾಧ್ಯಮಗಳಿಗೆ ತಿಳಿಸಿದ ಬಳಿಕ ಈ ವಿಷಯ ಬೆಳಕಿಗೆ ಬಂದಿತ್ತು.
ನೀಟ್ ಪರೀಕ್ಷೆಯನ್ನು ನಡೆಸುವ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್ಟಿಎ)ಯ ಬುಲೆಟಿನ್ನಲ್ಲಿ ಲೋಹದ ಹುಕ್ಗಳಿರುವ ಬ್ರಾದ ಕುರಿತು ಯಾವುದೇ ಉಲ್ಲೇಖವಿಲ್ಲ ಎಂದು ಯುವತಿಯ ತಂದೆ ದೂರಿನಲ್ಲಿ ತಿಳಿಸಿದ್ದಾರೆ.
ಆದರೆ,ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯೊಳಗೆ ಯಾವುದೇ ಲೋಹದ ವಸ್ತುಗಳನ್ನು ತರಲು ಅವಕಾಶವಿಲ್ಲ ಎಂದು ಬುಲೆಟಿನ್ನಲ್ಲಿ ತಿಳಿಸಲಾಗಿದೆ.
ಪರೀಕ್ಷೆಗಾಗಿ ‘ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಉಡುಪು ’ಧರಿಸಿದ್ದರೆ, ಪರೀಕ್ಷೆಯ ಪಾವಿತ್ರವನ್ನು ಕಾಯ್ದುಕೊಂಡು ಅಭ್ಯರ್ಥಿಗಳಿಗೆ ಯಾವುದೇ ಅನಾನುಕೂಲವಾಗದಂತೆ ಸೂಕ್ತ ತಪಾಸಣೆಗಾಗಿ ಸಾಕಷ್ಟು ಸಮಯ ದೊರೆಯುವಂತಾಗಲು ಕೊನೆಯ ವರದಿ ಮಾಡಿಕೊಳ್ಳುವುದಕ್ಕೆ ಕನಿಷ್ಠ ಒಂದು ಗಂಟೆ ಮೊದಲು ಪರೀಕ್ಷಾ ಕೇಂದ್ರವನ್ನು ತಲುಪಬೇಕು ಎಂದೂ ಬುಲೆಟಿನ್ನಲ್ಲಿ ಹೇಳಲಾಗಿದೆ.
ನಿಯಮವಿದ್ದರೆ ಅವರು ತಪಾಸಣೆ ಸಂದರ್ಭ ಒಳಉಡುಪನ್ನು ಪರೀಕ್ಷಿಸಬಹುದು. ಆದರೆ ಅದನ್ನೇಕೆ ತೆಗೆಸಬೇಕು? ನೀಟ್ ಬುಲೆಟಿನ್ನಲ್ಲಿ ಇಂತಹ ಯಾವುದೇ ನಿಯಮಗಳಿಲ್ಲ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಮಹಿಳಾ ಅಭ್ಯರ್ಥಿಯ ತಂದೆ ತಿಳಿಸಿದರು.
ಇದರಿಂದಾಗಿ ಮಹಿಳಾ ಅಭ್ಯರ್ಥಿಗಳಿಗೆ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ ಎಂದರು.
ಅಭ್ಯರ್ಥಿಗಳು ಕಳಚಿದ್ದ ಬ್ರಾಗಳನ್ನು ಕೋವಿಡ್ ನಿಯಮಗಳನ್ನು ಲೆಕ್ಕಿಸದೆ ದಾಸ್ತಾನು ಕೋಣೆಯಲ್ಲಿ ಗುಡ್ಡೆ ಹಾಕಲಾಗಿತ್ತು ಎಂದು ಅವರು ಆಪಾದಿಸಿದರು.
ಪರೀಕ್ಷಾ ಕೇಂದ್ರದಲ್ಲಿ ಇಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಅಲ್ಲಿಯ ಅಧಿಕಾರಿಗಳು ತನಗೆ ವರದಿ ಸಲ್ಲಿಸಿದ್ದಾರೆ ಎಂದು ಎನ್ಟಿಎ ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ.
ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆಯ ಸಂದರ್ಭದಲ್ಲಿ ಅಥವಾ ಪರೀಕ್ಷೆ ಮುಗಿದ ತಕ್ಷಣ ಯಾರೂ ದೂರು ಸಲ್ಲಿಸಿಲ್ಲ ಎಂದು ಅದು ಹೇಳಿದೆ.
ದೂರಿನಲ್ಲಿಯ ಆರೋಪಗಳು ಕಪೋಲಕಲ್ಪಿತವಾಗಿವೆ ಮತ್ತು ದುರುದ್ದೇಶದಿಂದ ದೂರನ್ನು ದಾಖಲಿಸಲಾಗಿದೆ ಎಂದು ಪರೀಕ್ಷಾ ಕೇಂದ್ರದ ಅಧೀಕ್ಷಕರು ಹೇಳಿರುವುದನ್ನು ಸುದ್ದಿಸಂಸ್ಥೆಯು ಉಲ್ಲೇಖಿಸಿದೆ.
ತಪಾಸಣೆಯಲ್ಲಿ ಸಂಸ್ಥೆಯ ಸಿಬ್ಬಂದಿಗಳು ಭಾಗಿಯಾಗಿದ್ದರು ಎನ್ನುವುದನ್ನು ನಿರಾಕರಿಸಿರುವ ಆಯೂರ್ ಶಿಕ್ಷಣ ಸಂಸ್ಥೆಯ ವಕ್ತಾರರು,ತಪಾಸಣೆ ಮತ್ತು ಬಯೊಮೆಟ್ರಿಕ್ ಹಾಜರಾತಿಯನ್ನು ದಾಖಲಿಸಲು ಎರಡು ಏಜೆನ್ಸಿಗಳಿಂದ ನಾಲ್ವರು ವ್ಯಕ್ತಿಗಳು ನಿಯೋಜಿತಗೊಂಡಿದ್ದರು. ಅವರಿಗೆ ತಪಾಸಣೆಗಾಗಿ ಪ್ರತ್ಯೇಕ ಸ್ಥಳಗಳನ್ನು ಒದಗಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಈ ನಡುವೆ ಕೇರಳದ ಉನ್ನತ ಶಿಕ್ಷಣ ಸಚಿವೆ ಕೆ.ಬಿಂದು ಅವರು,ಇಂತಹ ಘಟನೆಗಳನ್ನು ತಡೆಯಲು ಎನ್ಟಿಎ ವಿರುದ್ಧ ಕ್ರಮವನ್ನು ಕೈಗೊಳ್ಳುವಂತೆ ಆಗ್ರಹಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರಿಗೆ ಪತ್ರವನ್ನು ಬರೆದಿದ್ದಾರೆ.