ಪ್ಯಾಕ್‌ ಮಾಡದೇ ಮಾರುವ ಆಹಾರ ಪದಾರ್ಥಗಳಿಗೆ ಜಿಎಸ್ಟಿ ಅನ್ವಯವಾಗುವುದಿಲ್ಲ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌

Update: 2022-07-19 11:58 GMT

ಹೊಸದಿಲ್ಲಿ: ಹಲವಾರು ದಿನಬಳಕೆಯ ವಸ್ತುಗಳಿಗೆ ಜಿಎಸ್ಟಿ ಹೇರಿಕೆ ಮಾಡಿದ್ದರ ಕುರಿತು ಜನರು ದೇಶಾದ್ಯಂತ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಜಿಎಸ್‌ಟಿಯಿಂದ ವಿನಾಯಿತಿ ಪಡೆದ ಆಹಾರ ಪದಾರ್ಥಗಳ ಪಟ್ಟಿಯನ್ನು ನೀಡಿದ್ದಾರೆ. ಯಾವುದೇ ವಸ್ತುಗಳನ್ನು ಪ್ಯಾಕೆಟ್‌ ಮಾಡದೇ ಮಾರಾಟ ಮಾಡಿದರೆ ಅದಕ್ಕೆ ಜಿಎಸ್ಟಿ ಅನ್ವಯವಾಗುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. 

ಇವುಗಳಲ್ಲಿ ಬೇಳೆಕಾಳುಗಳು/ದಾಲ್, ಗೋಧಿ, ಓಟ್ಸ್, ಮೆಕ್ಕೆಜೋಳ, ಅಕ್ಕಿ, ಆಟಾ/ಹಿಟ್ಟು, ರವಾ, ಬೇಸನ್, ಉರಿಯಕ್ಕಿ ಮತ್ತು ಮೊಸರು/ಲಸ್ಸಿ ಮುಂತಾದ ಪದಾರ್ಥಗಳು ಸೇರಿವೆ.

ಸೋಮವಾರದಿಂದ ಜಾರಿಗೆ ಬಂದ ಜಿಎಸ್‌ಟಿಯ ಹೊಸ ದರಗಳ ಕುರಿತು ಸಚಿವರು ಸರಣಿ ಟ್ವೀಟ್‌ಗಳಲ್ಲಿ ಸ್ಪಷ್ಟಪಡಿಸಿದ್ದಾರೆ. ಜಿಎಸ್‌ಟಿ ದರಗಳು ಮತ್ತು ಬೆಲೆ ಏರಿಕೆಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆ ಲೋಕಸಭೆಯ ಕಲಾಪವನ್ನು ಮಂಗಳವಾರ ಮುಂದೂಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ನಿರ್ಮಲಾ ಸೀತಾರಾಮನ್ ಅವರು ತಮ್ಮ ಟ್ವೀಟ್‌ಗಳಲ್ಲಿ ಆಹಾರ ಪದಾರ್ಥಗಳ ಮೇಲೆ ಶೇಕಡಾ 5 ರಷ್ಟು ಜಿಎಸ್‌ಟಿ ವಿಧಿಸಿರುವುದನ್ನು ಸಮರ್ಥಿಸಿಕೊಂಡರು ಮತ್ತು ಜಿಎಸ್‌ಟಿ ಕೌನ್ಸಿಲ್ ಈ ನಿರ್ಧಾರವನ್ನು ಸರ್ವಾನುಮತದಿಂದ ತೆಗೆದುಕೊಂಡಿದೆ ಮತ್ತು ಜೂನ್‌ನಲ್ಲಿ ದರ ತರ್ಕಬದ್ಧಗೊಳಿಸುವಿಕೆಯ ಕುರಿತು ಸಚಿವರ ಗುಂಪು ಈ ವಿಷಯವನ್ನು ಮಂಡಿಸಿದಾಗ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಎಲ್ಲಾ ರಾಜ್ಯಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು ಎಂದು ಅವರು ಹೇಳಿದರು.

ಇಂತಹ ಆಹಾರ ಪದಾರ್ಥಗಳ ಮೇಲೆ ತೆರಿಗೆ ವಿಧಿಸುತ್ತಿರುವುದು ಇದೇ ಮೊದಲಲ್ಲ ಎಂದು ಅವರು ಹೇಳಿದರು. “ಜಿಎಸ್‌ಟಿ ಪೂರ್ವದ ಆಡಳಿತದಲ್ಲಿ ರಾಜ್ಯಗಳು ಆಹಾರಧಾನ್ಯದಿಂದ ಗಮನಾರ್ಹ ಆದಾಯವನ್ನು ಸಂಗ್ರಹಿಸುತ್ತಿದ್ದವು. ಪಂಜಾಬ್ ಒಂದರಲ್ಲೇ ಖರೀದಿ ತೆರಿಗೆಯ ಮೂಲಕ ಆಹಾರ ಧಾನ್ಯದ ಮೇಲೆ 2,000 ಕೋಟಿ ರೂ.ಗಳನ್ನು ಸಂಗ್ರಹಿಸಿದೆ. ಯುಪಿ 700 ಕೋಟಿ ಸಂಗ್ರಹಿಸಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News