ದಲಿತ ಬಾಲಕಿಯರಲ್ಲಿ ಸಮವಸ್ತ್ರ ತೆಗೆಯುವಂತೆ ಒತ್ತಾಯ: ಇಬ್ಬರು ಶಿಕ್ಷಕರ ವಿರುದ್ಧ ಪ್ರಕರಣ ದಾಖಲು

Update: 2022-07-19 14:14 GMT
ಸಾಂದರ್ಭಿಕ ಚಿತ್ರ

ಲಕ್ನೋ: ಉತ್ತರ ಪ್ರದೇಶದ ಹಾಪುರ್‌ನಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ದಲಿತ ವಿದ್ಯಾರ್ಥಿನಿಯರ ಸಮವಸ್ತ್ರವನ್ನು ತೆಗೆಯುವಂತೆ ಒತ್ತಾಯಿಸಿದ ಇಬ್ಬರು ಶಿಕ್ಷಕರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು indianexpress.com ವರದಿ ಮಾಡಿದೆ.

ಜುಲೈ 11 ರಂದು ಶಾಲಾ ಸಮವಸ್ತ್ರದಲ್ಲಿರುವ ವಿದ್ಯಾರ್ಥಿಗಳ ಛಾಯಾಚಿತ್ರಗಳನ್ನು ಶಿಕ್ಷಕರು ಕ್ಲಿಕ್ಕಿಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಛಾಯಾಚಿತ್ರ ತೆಗೆಯಲು ಸಾಮಾನ್ಯ ಬಟ್ಟೆಯಲ್ಲಿ ಬಂದ ಇತರ ಇಬ್ಬರು ಹುಡುಗಿಯರಿಗೆ ಸಮವಸ್ತ್ರವನ್ನು ನೀಡುವಂತೆ ದಲಿತ ವಿದ್ಯಾರ್ಥಿನಿಯರಿಗೆ ಶಿಕ್ಷಕರು ಒತ್ತಾಯಿಸಿದ್ದು,   ಹುಡುಗಿಯರಯ ಇದಕ್ಕೆ ನಿರಾಕರಿಸಿದಾಗ, ಅವರನ್ನು ಥಳಿಸಿ, ಅವರ ಸಮವಸ್ತ್ರವನ್ನು ಬಲವಂತವಾಗಿ ಬಿಚ್ಚಿಸಲಾಯಿತು, ಅವರ ಜಾತಿಯ ಕಾರಣದಿಂದ ಅವರ ವಿರುದ್ಧ ತಾರತಮ್ಯ ಮಾಡಿದ್ದಾರೆ ಎಂದು ಸಂತ್ರಸ್ತ ಬಾಲಕಿಯರ ಪೋಷಕರು ಆರೋಪಿಸಿದ್ದಾರೆ.

“ಶಿಕ್ಷಕರು ಶಾಲಾ ಸಮವಸ್ತ್ರದಲ್ಲಿರುವ ವಿದ್ಯಾರ್ಥಿಗಳ ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದರು. ನನ್ನ ಮಗಳ ಸಮವಸ್ತ್ರವನ್ನು ತೆಗೆದು ಬೇರೆ ಹುಡುಗಿಗೆ ಕೊಡುವಂತೆ ಕೇಳಲಾಯಿತು. ನನ್ನ ಮಗಳು ಅದನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದಾಗ, ಅವರು ಅವಳನ್ನು ಹೊಡೆದು ಬಲವಂತವಾಗಿ ಅವಳ ಸಮವಸ್ತ್ರವನ್ನು ತೆಗೆದುಹಾಕಿದರು. ನಾನು ಶಾಲೆಗೆ ದೂರು ನೀಡಿದಾಗ, ಏಕೆ ಹೀಗೆ ಮಾಡಲಾಗಿದೆ ಎಂದು ನನಗೆ ಉತ್ತರ ಸಿಗಲಿಲ್ಲ, ”ಎಂದು ಬಾಲಕಿಯರೊಬ್ಬರ ತಾಯಿ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಮತ್ತೊಬ್ಬ ಬಾಲಕಿಯ ತಂದೆ ಜಾತಿ ವಿರೋಧಿ ಸಂಘಟನೆ ಶೋಷಿತ್ ಕ್ರಾಂತಿ ದಳದೊಂದಿಗೆ ವಿಷಯ ಪ್ರಸ್ತಾಪಿಸಿದ್ದು, ಅದರ ಅಧ್ಯಕ್ಷ ರವಿಕಾಂತ್ ಅವರು ಹಾಪುರ್‌ನ ಮೂಲಭೂತ ಶಿಕ್ಷಾ ಅಧಿಕಾರಿಯ ಗಮನಕ್ಕೆ ಸಮಸ್ಯೆಯನ್ನು ತಂದಿದ್ದಾರೆ.

“ಇಬ್ಬರು ಬಾಲಕಿಯರು ಪರಿಶಿಷ್ಟ ಜಾತಿಗೆ ಸೇರಿದವರಾಗಿರುವುದರಿಂದ ಶಿಕ್ಷಕರ ಕ್ರಮ ಉದ್ದೇಶಪೂರ್ವಕ ಕ್ರಮವಾಗಿದೆ. ತಂದೆ ನನ್ನನ್ನು ಸಂಪರ್ಕಿಸಿದಾಗ, ನಾನು ಶಿಕ್ಷಣ ಇಲಾಖೆಯೊಂದಿಗೆ ವಿಷಯವನ್ನು  ಹಂಚಿಕೊಂಡೆ ಮತ್ತು ಶಿಕ್ಷಕರನ್ನು ಅಮಾನತುಗೊಳಿಸುವಂತೆ ವಿನಂತಿಸಿದೆ, ”ಎಂದು ರವಿಕಾಂತ್ ಹೇಳಿರುವುದಾಗಿ ವರದಿಯಾಗಿದೆ.

ಆದರೆ, ತಾರತಮ್ಯದ ಆರೋಪವನ್ನು ಶಿಕ್ಷಕರೊಬ್ಬರು ನಿರಾಕರಿಸಿದ್ದಾರೆ. “ವಿದ್ಯಾರ್ಥಿಗಳಿಗೆ ಸಂಪೂರ್ಣ ಶಾಲಾ ಸಮವಸ್ತ್ರವನ್ನು ಧರಿಸಿ ಶಾಲೆಗೆ ಬರಲು ಸೂಚಿಸಲಾಗಿತ್ತು. ಜುಲೈ 11 ರಂದು ವಿದ್ಯಾರ್ಥಿಗಳ ಛಾಯಾಚಿತ್ರಗಳನ್ನು ಕ್ಲಿಕ್ಕಿಸುತ್ತಿದ್ದಾಗ, ಸಮವಸ್ತ್ರದಲ್ಲಿ ಬರದ ಕೆಲವು ವಿದ್ಯಾರ್ಥಿಗಳು ತಮ್ಮ ಸಹ ವಿದ್ಯಾರ್ಥಿಗಳಿಗೆ ಛಾಯಾಚಿತ್ರಕ್ಕಾಗಿ ಸಮವಸ್ತ್ರವನ್ನು ಕೊಡುವಂತೆ ಕೇಳಿದ್ದಾರೆ. ಆದರೆ, ಈ ರೀತಿಯ ಘಟನೆ ನಡೆದಿದೆ ಎಂದು ನನಗೆ ತಿಳಿದಿರಲಿಲ್ಲ. ಜುಲೈ 12 ರಂದು ಇಬ್ಬರು ಹುಡುಗಿಯರ ಪೋಷಕರು ಶಾಲೆಗೆ ಬಂದು ನಮ್ಮನ್ನು ಪ್ರಶ್ನಿಸಲು ಪ್ರಾರಂಭಿಸಿದಾಗ ಈ ವಿಚಾರ ನನಗೆ ತಿಳಿಯಿತು, ”ಎಂದು ಶಿಕ್ಷಕರು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. ಅದಾಗ್ಯೂ, ಬಾಲಕಿಯರನ್ನು ಥಳಿಸಿರುವುದನ್ನು ಅವರು ನಿರಾಕರಿಸಿದ್ದಾರೆ.

ಶಿಕ್ಷಕರನ್ನು ಅಮಾನತು ಮಾಡಿದರೂ ಶಿಕ್ಷಕರು ಶಾಲೆಗೆ ಬರುತ್ತಿದ್ದಾರೆ ಎಂದು ಪೋಷಕರು ಹೇಳಿದ್ದಾರೆ. ತನ್ನ ಜವಾಬ್ದಾರಿಯಿಂದ ಅಮಾನತುಗೊಂಡಿದ್ದರೂ, ಶಾಲೆಯ ಕೀಲಿಗಳ ಉಸ್ತುವಾರಿ ವಹಿಸಿದ್ದರಿಂದ ಶಾಲೆಗೆ ಬರುವಂತೆ ಹೇಳಲಾಗಿದೆ ಎಂದು ಅಮಾನತುಗೊಂಡ ಶಿಕ್ಷಕರೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News