ಅರುಣಾಚಲ: ಜು.5ರಿಂದ ಭಾರತ-ಚೀನಾ ಗಡಿ ಬಳಿ ಓರ್ವ ಕಾರ್ಮಿಕನ ಸಾವು,18 ಜನರು ನಾಪತ್ತೆ
ಇಟಾನಗರ,ಜು.19: ಭಾರತ-ಚೀನಾ ಗಡಿಗೆ ಸಮೀಪದ ಅರುಣಾಚಲ ಪ್ರದೇಶದ ಕುರುಂಗ್ ಕುಮೇ ಜಿಲ್ಲೆಯಲ್ಲಿ ಓರ್ವ ಕಾರ್ಮಿಕನ ಶವ ಪತ್ತೆಯಾಗಿದ್ದು,ಇತರ 18 ಜನರು ನಾಪತ್ತೆಯಾಗಿದ್ದಾರೆ.
ಎಲ್ಲ 19 ಕಾರ್ಮಿಕರು ಗಡಿ ರಸ್ತೆ ಸಂಸ್ಥೆಗಾಗಿ ದುಡಿಯುತ್ತಿದ್ದು, ಜು.5ರಂದು ನಾಪತ್ತೆಯಾಗಿದ್ದರು. ಸೋಮವಾರ ಜಿಲ್ಲೆಯ ದಾಮಿನ್ ಸರ್ಕಲ್ ವ್ಯಾಪ್ತಿಯ ನದಿಯಲ್ಲಿ ಓರ್ವ ಕಾರ್ಮಿಕನ ಶವ ಪತ್ತೆಯಾಗಿದೆ ಎಂದು ಕುರುಂಗ್ ಕುಮೇ ಜಿಲ್ಲಾಧಿಕಾರಿ ಬೆಂಗಿಯಾ ನಿಘೀ ಅವರು ಸುದ್ದಿಸಂಸ್ಥೆಗೆ ತಿಳಿಸಿದರು. ಕಾರ್ಮಿಕರು ದಾಮಿನ್ ಸರ್ಕಲ್ ವ್ಯಾಪ್ತಿಯ ಹುರಿ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಕೊಂಡಿದ್ದರು ಎಂದರು.
ಕಾರ್ಮಿಕರು ಈದ್ ಆಚರಣೆಗಾಗಿ ರಜೆಯನ್ನು ಕೋರಿದ್ದರು,ಆದರೆ ಗುತ್ತಿಗೆದಾರ ನಿರಾಕರಿಸಿದಾಗ ಅಲ್ಲಿಂದ ನಿರ್ಗಮಿಸಿದ್ದರು ಎಂದು ಸ್ಥಳೀಯ ಮಾಧ್ಯಮವು ವರದಿ ಮಾಡಿದೆ.
ಕಾರ್ಮಿಕರು ಅರಣ್ಯದಲ್ಲಿ ಕಳೆದುಹೋಗಿರಬಹುದು ಎಂದು ನಿಘೀ ಹೇಳಿದರು. ಆದರೆ ಎಲ್ಲ ಕಾರ್ಮಿಕರು ಕುಮೇ ನದಿಯಲ್ಲಿ ಮುಳುಗಿದ್ದಾರೆ ಎಂದು ಸ್ಥಳೀಯ ನಿವಾಸಿಗಳನ್ನು ಉಲ್ಲೇಖಿಸಿ ಮಾಧ್ಯಮವು ವರದಿ ಮಾಡಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿಕೊಳ್ಳಲಾಗಿರುವ ಆಡಿಯೋ ಕ್ಲಿಪ್ನಲ್ಲಿಯೂ ನದಿಯಲ್ಲಿ 16 ಶವಗಳು ತೇಲುತ್ತಿರುವುದು ಕಂಡು ಬಂದಿದೆ ಎಂದು ಹೇಳಲಾಗಿದೆ. ಆಡಿಯೊ ಕ್ಲಿಪ್ ಹುಸಿ ಎಂದು ನಿಘೀ ತಳ್ಳಿಹಾಕಿದ್ದಾರೆ. ಆದರೆ ಕಾರ್ಮಿಕರು ನದಿಯಲ್ಲಿ ಮುಳುಗಿದ್ದಾರೆ ಎಂಬ ಹೇಳಿಕೆಗಳನ್ನು ಪರಿಶೀಲಿಸಲು ರಕ್ಷಣಾ ತಂಡವೊಂದನ್ನು ಅಲ್ಲಿಗೆ ರವಾನಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.