×
Ad

ಕೆಳ ವರ್ಗಕ್ಕೆ ಸೇರಿದವನಾಗಿರುವುದರಿಂದ ಅಧಿಕಾರಿಗಳು ಆದೇಶ ಪಾಲಿಸುತ್ತಿಲ್ಲ ಎಂದು ರಾಜೀನಾಮೆ ಕೊಟ್ಟ ಉ.ಪ್ರ. ಸಚಿವ

Update: 2022-07-20 13:37 IST

ಲಕ್ನೋ,ಜು.20: ಉತ್ತರ ಪ್ರದೇಶದ ಜಲಸಂಪನ್ಮೂಲ ಸಚಿವ ದಿನೇಶ ಖಾಟಿಕ್ ಅವರು ತಾನು ದಲಿತ ಎಂಬ ಕಾರಣಕ್ಕಾಗಿ ತನ್ನನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿ ತನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇದರೊಂದಿಗೆ ಕೆಲವೇ ತಿಂಗಳುಗಳ ಹಿಂದೆ ಭಾರೀ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೇರಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ತೀವ್ರ ಹಿನ್ನಡೆಯುಂಟಾಗಿದೆ. ಖಾಟಿಕ್ ತನ್ನ ರಾಜೀನಾಮೆ ಪತ್ರವನ್ನು ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ಕಳುಹಿಸಿದ್ದಾರೆ.

 ಮುಖ್ಯಮಂತ್ರಿ ವಿರುದ್ಧ ತೀವ್ರ ಅಸಮಾಧಾನದ ಬೇಗೆಯಲ್ಲಿ ಬೇಯುತ್ತಿರುವ ಇನ್ನೋರ್ವ ಸಚಿವ ಜಿತಿನ್ ಪ್ರಸಾದ ಅವರು ದಿಲ್ಲಿಯಲ್ಲಿದ್ದು,ಪಕ್ಷದ ಉನ್ನತ ನಾಯಕರನ್ನು ಭೇಟಿಯಾಗುತ್ತಿದ್ದಾರೆ. ಇದು ಯಾವುದೇ ಬಿಜೆಪಿ ಸರಕಾರದಲ್ಲಿ ಅತೃಪ್ತಿ ಬಹಿರಂಗಗೊಂಡಿರುವ ಅಪರೂಪದ ನಿದರ್ಶನವಾಗಿದೆ.

ತನಗೆ ಕಳೆದ 100 ದಿನಗಳಲ್ಲಿ ಯಾವುದೇ ಕಾರ್ಯವನ್ನು ನೀಡಿಲ್ಲ. ನೊಂದು ತಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಪತ್ರದಲ್ಲಿ ತಿಳಿಸಿರುವ ಖಾಟಿಕ್ ಇಲಾಖಾ ವರ್ಗಾವಣೆಗಳಲ್ಲಿ ಅವ್ಯವಹಾರಗಳ ಬಗ್ಗೆ ಆರೋಪಿಸಿದ್ದಾರೆ.

‘ನಾನು ದಲಿತನಾಗಿರುವುದರಿಂದ ನನಗೆ ಯಾವುದೇ ಮಹತ್ವವನ್ನು ನೀಡಲಾಗಿಲ್ಲ. ಓರ್ವ ಸಚಿವನಾಗಿ ನನಗೆ ಯಾವುದೇ ಅಧಿಕಾರವಿಲ್ಲ. ರಾಜ್ಯದ ಓರ್ವ ಸಚಿವನಾಗಿ ನಾನು ದಲಿತ ಸಮುದಾಯಕ್ಕೆ ಉಪಯೋಗವಿಲ್ಲದಂತಾಗಿದೆ. ಯಾವುದೇ ಸಭೆಗೆ ನನ್ನನ್ನು ಕರೆಯಲಾಗಿಲ್ಲ ಮತ್ತು ನನ್ನ ಸಚಿವಾಲಯದ ಬಗ್ಗೆ ನನಗೆ ಏನನ್ನೂ ಹೇಳಲಾಗಿಲ್ಲ. ಇದು ದಲಿತ ಸಮುದಾಯಕ್ಕೆ ಮಾಡಿರುವ ಅವಮಾನವಾಗಿದೆ’ ಎಂದೂ ಅವರು ನೋವು ತೋಡಿಕೊಂಡಿದ್ದಾರೆ. ಖಾಟಿಕ್ ರಾಜೀನಾಮೆಯಿಂದ ಹಿಂದೆ ಸರಿಯುವಂತೆ ಮಾಡಲು ಪಕ್ಷವು ಪ್ರಯತ್ನಿಸುತ್ತಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿಗಳು ತನ್ನ ತಂಡದಲ್ಲಿಯ ಅಧಿಕಾರಿಯೋರ್ವನನ್ನು ಅಮಾನತುಗೊಳಿಸಿರುವುದು ಜಿತಿನ್ ಪ್ರಸಾದರನ್ನು ಕುಪಿತಗೊಳಿಸಿದೆ. ಪ್ರಸಾದ ಕಳೆದ ವರ್ಷ ಉ.ಪ್ರ.ಚುನಾವಣೆಗೆ ಮೊದಲು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದರು.

ಪ್ರಸಾದ್ ಪಿಡಬ್ಲುಡಿಯಂತಹ ಪ್ರಮುಖ ಖಾತೆಯನ್ನು ಹೊಂದಿದ್ದಾರೆ, ಆದರೆ ಇಲಾಖೆಯು ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದೆ. ಮುಖ್ಯಮಂತ್ರಿಗಳ ಕಚೇರಿಯು ತನಿಖೆಗೆ ಆದೇಶಿಸಿದ್ದು,ಹಲವಾರು ಅಧಿಕಾರಿಗಳು ವರ್ಗಾವಣೆಗಳಿಗಾಗಿ ಲಂಚ ವ್ಯವಹಾರದಲ್ಲಿ ತೊಡಗಿರುವುದು ಕಂಡು ಬಂದಿದೆ.

ಮಂಗಳವಾರ ಉ.ಪ್ರ.ಸರಕಾರವು ಇಲಾಖಾ ವರ್ಗಾವಣೆಗಳಲ್ಲಿ ಗಂಭೀರ ಅವ್ಯವಹಾರಗಳಿಗಾಗಿ ಐವರು ಹಿರಿಯ ಪಿಡಬ್ಲುಡಿ ಅಧಿಕಾರಿಗಳನ್ನು ಅಮಾನತುಗೊಳಿಸಿದೆ.

ವರ್ಗಾವಣೆ ಮತ್ತು ನಿಯೋಜನೆಗಳಿಗಾಗಿ ಲಂಚವನ್ನು ಪಡೆಯುತ್ತಿದ್ದ ಆರೋಪಿಗಳಲ್ಲಿ ಪ್ರಸಾದರ ವಿಶೇಷ ಕರ್ತವ್ಯಾಧಿಕಾರಿಯಾಗಿರುವ ಐಎಎಸ್ ಅಧಿಕಾರಿ ಅನಿಲ ಕುಮಾರ ಪಾಂಡೆ ಸೇರಿದ್ದಾರೆ. ಪಾಂಡೆಯವರನ್ನು ಹುದ್ದೆಯಿಂದ ಅಮಾನತುಗೊಳಿಸಲಾಗಿದ್ದು,ಅವರ ವಿರುದ್ಧ ಜಾಗ್ರತ ತನಿಖೆಯನ್ನು ಆರಂಭಿಸಲಾಗಿದೆ. ಇದರಿಂದಾಗಿ ಪ್ರಸಾದ ಕೂಡ ತನ್ನ ಕಣ್ಗಾವಲಿನಲ್ಲಿ ಭ್ರಷ್ಟಾಚಾರದ ಕುರಿತು ಪ್ರಶ್ನೆಗಳನ್ನು ಎದುರಿಸುತ್ತಿದ್ದಾರೆ.

ಪ್ರಸಾದರನ್ನು ಕರೆಸಿಕೊಂಡಿದ್ದ ಯೋಗಿ ಆದಿತ್ಯನಾಥ,ಪಾಂಡೆ ವಿರುದ್ಧ ಭ್ರಷ್ಟಾಚಾರದ ಆರೋಪಗಳಿಗಾಗಿ ಅವರನ್ನು ತರಾಟೆಗೆತ್ತಿಕೊಂಡಿದ್ದರು.

ಬಳಿಕ ಪ್ರಸಾದ ತನ್ನ ದೂರನ್ನು ಹೇಳಿಕೊಳ್ಳಲು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಅಮಿತ್ ಶಾ ಅವರ ಭೇಟಿಗೆ ಅವಕಾಶವನ್ನು ಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News