ತಡೆಯಲು ಬಂದ ಕಾನ್‍ಸ್ಟೇಬಲ್ ಮೇಲೆ ಟ್ರಕ್ ಹರಿಸಿದ ಚಾಲಕ: 24 ಗಂಟೆಗಳಲ್ಲಿ ಮೂರನೇ ಪ್ರಕರಣ
Update: 2022-07-20 18:33 IST
ಅಹ್ಮದಾಬಾದ್: ಗುಜರಾತ್ ಬೋರ್ಸದ್ ಎಂಬಲ್ಲಿ ಟ್ರಕ್ ಒಂದನ್ನು ನಿಲ್ಲಿಸಲು ಸಂಜ್ಞೆ ಮಾಡಿದ ಪೊಲೀಸ್ ಕಾನ್‍ಸ್ಟೇಬಲ್ ಒಬ್ಬರ ಮೇಲೆ ಚಾಲಕ ಟ್ರಕ್ ಅನ್ನು ಹರಿಸಿ ಸಾಯಿಸಿದ ಆಘಾತಕಾರಿ ಘಟನೆ ಇಂದು ವರದಿಯಾಗಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ನಡೆದ ಮೂರನೇ ಇಂತಹ ಪ್ರಕರಣ ಇದಾಗಿದೆ.
ಬುಧವಾರ ಬೆಳಗ್ಗಿನ ಜಾವ ಸುಮಾರು ಒಂದು ಗಂಟೆಗೆ ಕಾನ್‍ಸ್ಟೇಬಲ್ ಕಿರಣ್ ರಾಜ್ ಎಂಬವರು ರಾಜಸ್ಥಾನ ನಂಬರ್ ಪ್ಲೇಟ್ ಹೊಂದಿದ್ದ ಟ್ರಕ್ ಒಂದನ್ನು ಶಂಕೆಯ ಆಧಾರದಲ್ಲಿ ನಿಲ್ಲಿಸಲು ಸಂಜ್ಞೆ ಮಾಡಿದ್ದರು. ಆದರೆ ನಿಲ್ಲಿಸುವ ಬದಲು ಟ್ರಕ್ ಚಾಲಕ ಆಕ್ಸಿಲರೇಟರ್ ಒತ್ತಿ ಪೊಲೀಸ್ ಕಾನ್‍ಸ್ಟೇಬಲ್ ಮೇಲೆಯೇ ಟ್ರಕ್ ಅನ್ನು ಹರಿಸಿ ಸ್ಥಳದಿಂದ ಪರಾರಿಯಾಗಿದ್ದ. ಕಿರಣ್ ರಾಜ್ ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ
ಆರೋಪಿ ಟ್ರಕ್ ಚಾಲಕನನ್ನು ಗುರುತಿಸಲಾಗಿದ್ದು ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.