ಪತ್ರಕರ್ತನಲ್ಲಿ ಬರೆಯಬೇಡ ಎನ್ನಲು ಸಾಧ್ಯವಿಲ್ಲ: ಝುಬೈರ್‌ ವಿರುದ್ಧ ಉ.ಪ್ರ ಸರ್ಕಾರ ಮಾಡಿದ ಮನವಿ ತಿರಸ್ಕರಿಸಿದ ಸುಪ್ರೀಂ

Update: 2022-07-20 13:45 GMT

ಹೊಸದಿಲ್ಲಿ: ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮುಹಮ್ಮದ್ ಝುಬೈರ್ ಅವರ ವಿರುದ್ಧ ಅವಹೇಳನಕಾರಿ ಟ್ವೀಟ್‌ಗಳ ಆರೋಪದ ಮೇಲೆ ದಾಖಲಾಗಿರುವ ಎಲ್ಲಾ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಜಾಮೀನು ನೀಡಿದ್ದು, ಮುಹಮ್ಮದ್ ಝುಬೈರ್ ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ.

ಮುಹಮ್ಮದ್ ಝುಬೈರ್ ವಿರುದ್ಧ ಉತ್ತರಪ್ರದೇಶದಲ್ಲಿ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು ದೆಹಲಿ ಪೊಲೀಸ್ ವಿಶೇಷ ತಂಡಕ್ಕೆ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಇದೇ ವೇಳೆ, ಝುಬೈರ್‌ ಅವರಿಗೆ ಜಾಮೀನು ನೀಡುವಾಗ ಷರತ್ತುಗಳನ್ನು ವಿಧಿಸಬೇಕೆಂದು ಉತ್ತರ ಪ್ರದೇಶದ ಸರ್ಕಾರಿ ವಕೀಲರಾದ ಗರಿಮ ಪ್ರಸಾದ್ ಮಾಡಿದ ಮನವಿ ನಿರಾಕರಿಸಿದ ಜಸ್ಟೀಸ್ ಚಂದ್ರಚೂಡ್‌ರವರು, "ಪತ್ರಕರ್ತನನ್ನು ಬರೆಯಬೇಡ ಎಂದು ಹೇಳಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ. 

ಅರ್ಜಿದಾರರನ್ನು ನಿರಂತರ ಬಂಧನದಲ್ಲಿಡಲು ಯಾವುದೇ ಸಮರ್ಥನೆ ಇಲ್ಲ ಎಂದು ನ್ಯಾಯಾಲಯದ ಆದೇಶವು ಹೇಳಿದೆ. ಮಹಮ್ಮದ್ ಝುಬೈರ್‌ ಟ್ವೀಟ್ ಮಾಡುವುದನ್ನು ತಡೆಯಲು ಯುಪಿ ಸರ್ಕಾರದ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯ, "ನಾವು ಅದನ್ನು ಹೇಗೆ ಹೇಳಬಹುದು? ಇದು ವಕೀಲರನ್ನು ವಾದಿಸಬೇಡಿ ಎಂದು ಹೇಳಿದ ಹಾಗಾಗುತ್ತದೆ. ಅವರು ಮಾಡುವ ಯಾವುದೇ ಟ್ವೀಟ್ ಕಾನೂನಿಗೆ ವಿರುದ್ಧವಾಗಿದ್ದರೆ, ಅದಕ್ಕೆ ಅವರು ಹೊಣೆಗಾರರಾಗಿರುತ್ತಾರೆ. ಒಬ್ಬರು ಮಾತನಾಡದಂತೆ ಮೊದಲೇ ಆದೇಶ ಹೊರಡಿಸಲು ಸಾಧ್ಯವಿಲ್ಲ” ಎಂದು ಹೇಳಿದೆ. 

ಸುಪ್ರೀಂ ಕೋರ್ಟ್ ಆದೇಶವು ಯುಪಿ ಸರ್ಕಾರವು ರಚಿಸಿರುವ ವಿಶೇಷ ತನಿಖಾ ತಂಡವನ್ನು ವಿಸರ್ಜಿಸುತ್ತಿದೆ ಮತ್ತು  "ಮೇಲಿನ ಎಲ್ಲಾ ಎಫ್‌ಐಆರ್‌ಗಳಲ್ಲಿನ ತನಿಖೆಯನ್ನು ಉ.ಪ್ರ. ಪೊಲೀಸರಿಂದ ದೆಹಲಿ ಪೊಲೀಸರ ವಿಶೇಷ ಸೆಲ್‌ಗೆ ವರ್ಗಾಯಿಸಲಾಗುತ್ತದೆ" ಎಂದು ನ್ಯಾಯಾಲಯ ಆದೇಶ ಹೇಳಿದೆ. ಪ್ರಕರಣಗಳ ವರ್ಗಾವಣೆಯನ್ನು ಸ್ಪಷ್ಟಪಡಿಸಿದ ನ್ಯಾಯಾಲಯವು, ಎಫ್‌ಐಆರ್‌ಗಳ ವರ್ಗಾವಣೆಯು ಅಸ್ತಿತ್ವದಲ್ಲಿರುವ ಎಲ್ಲಾ ಎಫ್‌ಐಆರ್‌ಗಳಿಗೆ ಮತ್ತು ಅದೇ ವಿಷಯದ ಮೇಲೆ ನೋಂದಾಯಿಸಬಹುದಾದ ಎಲ್ಲಾ ಭವಿಷ್ಯದ ಎಫ್‌ಐಆರ್‌ಗಳಿಗೆ ಅನ್ವಯಿಸುತ್ತದೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News