24 ದಿನಗಳ ಬಳಿಕ ಜೈಲಿನಿಂದ ಬಿಡುಗಡೆಗೊಂಡ ಪತ್ರಕರ್ತ ಝುಬೈರ್‌

Update: 2022-07-20 15:42 GMT
ಮುಹಮ್ಮದ್ ಝುಬೈರ್ (PTI)

ಹೊಸದಿಲ್ಲಿ: 24 ದಿನಗಳ ಕಾಲ ತಿಹಾರ್ ಜೈಲಿನಲ್ಲಿ ಬಂಧಿಯಾಗಿದ್ದ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮುಹಮ್ಮದ್ ಝುಬೈರ್ ಅವರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದ ಬಳಿಕ ಜೈಲಿನಿಂದ ಬುಧವಾರ ಸಂಜೆ ಬಿಡುಗಡೆಗೊಂಡರು.

ದ್ವೇಷ ಭಾಷಣದ ಆರೋಪದ ಮೇಲೆ ಉತ್ತರ ಪ್ರದೇಶದಾದ್ಯಂತ ಅವರ ವಿರುದ್ಧ ದಾಖಲಾಗಿರುವ ಆರು ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಅವರಿಗೆ ಮಧ್ಯಂತರ ಜಾಮೀನು ನೀಡಿತ್ತು. ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ, ಝುಬೈರ್ ಅವರನ್ನು ನಿರಂತರ ಕಸ್ಟಡಿಯಲ್ಲಿ ಇಡಲು ಯಾವುದೇ ಸಮರ್ಥನೆ ಇಲ್ಲ ಎಂದು ಹೇಳಿದೆ.

ಝುಬೈರ್‌ ವಿರುದ್ಧ ಎರಡು ಹತ್ರಾಸ್‌ನಲ್ಲಿ, ತಲಾ ಒಂದರಂತೆ ಮುಝಾಫರ್‌ನಗರ, ಗಾಜಿಯಾಬಾದ್, ಲಖಿಂಪುರ ಖೇರಿ ಮತ್ತು ಸೀತಾಪುರ ಜಿಲ್ಲೆಗಳಲ್ಲಿ ಪ್ರಕರಣ ದಾಖಲಾಗಿವೆ. ಈಗಾಗಲೇ ಚಾರ್ಜ್‌ಶೀಟ್ ಸಲ್ಲಿಸಿರುವ ಚಂದೌಲಿಯಲ್ಲಿ ಒಂದು ಪ್ರಕರಣವನ್ನು ದಿಲ್ಲಿಯ ಪಟಿಯಾಲಾ ಹೌಸ್ ಕೋರ್ಟ್‌ನ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ವಿಚಾರಣೆಗೆ ವರ್ಗಾಯಿಸಲಾಗಿದೆ.

ಸುಪ್ರೀಂ ಕೋರ್ಟ್ ಆದೇಶದ ನಂತರ, ದಿಲ್ಲಿ ನ್ಯಾಯಾಲಯವು ಯುಪಿ ಮತ್ತು ದಿಲ್ಲಿಯಲ್ಲಿ ಝುಬೈರ್ ವಿರುದ್ಧ ದಾಖಲಾಗಿರುವ ಏಳು ಪ್ರಕರಣಗಳಲ್ಲಿ ಬಿಡುಗಡೆ ವಾರಂಟ್ ಹೊರಡಿಸಿದೆ ಎಂದು ಅವರ ವಕೀಲರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಝುಬೈರ್ 2018 ರಲ್ಲಿ ಪೋಸ್ಟ್ ಮಾಡಿದ ಟ್ವೀಟ್ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ದಿಲ್ಲಿ ಪೊಲೀಸರು ಜೂನ್ 27 ರಂದು ಅವರನ್ನು ಬಂಧಿಸಿದ್ದರು. ಅವರ ವಿರುದ್ಧ ಸೆಕ್ಷನ್ 153A (ಗಲಭೆ ಉಂಟು ಮಾಡುವ ಉದ್ದೇಶದಿಂದ ಪ್ರಚೋದನೆ ನೀಡುವುದು) ಮತ್ತು 295A ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಇದನ್ನೂ ಓದಿ: ಝುಬೈರ್‌ಗೆ ಜಾಮೀನು- ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರಿಂದ ಸ್ವಾಗತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News