ನಾಗಾಲ್ಯಾಂಡ್ ನಾಗರಿಕರ ಹತ್ಯೆ ಪ್ರಕರಣ: ಆರೋಪಿ ಸೇನಾ ಸಿಬ್ಬಂದಿಗಳ ವಿರುದ್ಧ ಪೊಲೀಸ್ ಕ್ರಮಕ್ಕೆ ಸುಪ್ರೀಂ ಕೋರ್ಟ್ ತಡೆ

Update: 2022-07-20 15:45 GMT

ಹೊಸದಿಲ್ಲಿ,ಜು.20: ನಾಗಾಲ್ಯಾಂಡ್‌ನ ಮೊನ್ ಜಿಲ್ಲೆಯಲ್ಲಿ ಡಿಸೆಂಬರ್ 2021ರಲ್ಲಿ 14 ನಾಗರಿಕರ ಹತ್ಯೆಗೆ ಕಾರಣರಾಗಿದ್ದರು ಎನ್ನಲಾಗಿರುವ 30 ಸೇನಾ ಸಿಬ್ಬಂದಿಗಳ ವಿರುದ್ಧ ಪೊಲೀಸರು ಆರಂಭಿಸಿರುವ ಕಾನೂನು ಕ್ರಮಗಳಿಗೆ ಸರ್ವೋಚ್ಚ ನ್ಯಾಯಾಲಯವು ತಡೆಯಾಜ್ಞೆಯನ್ನು ನೀಡಿದೆ.

 ಹಿಂಸಾಚಾರದ ಸಂದರ್ಭದಲ್ಲಿ ಪ್ಯಾರಾಟ್ರೂಪರ್ ಗೌತಮ ಲಾಲ ಅವರ ಸಾವಿನ ಕುರಿತು ತನಿಖೆ ಇನ್ನೂ ಪೂರ್ಣಗೊಂಡಿಲ್ಲ ಎನ್ನುವುದನ್ನೂ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ವಿ.ರಾಮಸುಬ್ರಮಣಿಯನ್ ಅವರ ಪೀಠವು ಗಮನಿಸಿದೆ. ನಾಗರಿಕರ ಹತ್ಯೆಗಳು ನಡೆದ ದಿನವೇ ರಾತ್ರಿ ಕುಪಿತ ನಾಗರಿಕರು ಲಾಲ್‌ರನ್ನು ಹತ್ಯೆಗೈದಿದ್ದರು,ಅವರು ಮೊನ್ ಎನ್‌ಕೌಂಟರ್ ಸಂದರ್ಭ ಮೃತಪಟ್ಟಿರಲಿಲ್ಲ.

 ಆರೋಪಿ ಸೇನಾಧಿಕಾರಿ ಮೇ.ಅಂಕುಶ ಗುಪ್ತಾರ ಪತ್ನಿ ಅಂಜಲಿ ಗುಪ್ತಾ ಸೇರಿದಂತೆ ಇಬ್ಬರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಕೈಗೆತ್ತಿಕೊಂಡಿದೆ. ತನ್ನ ಪತಿಯನ್ನು ಹೆಸರಿಸಲಾಗಿರುವ ಎಫ್‌ಐಆರ್,ವಿಶೇಷ ತನಿಖಾ ತಂಡ(ಸಿಟ್)ದ ವರದಿ ಮತ್ತು ಇತರ ಪೂರಕ ಪ್ರಕ್ರಿಯೆಗಳನ್ನು ರದ್ದುಗೊಳಿಸುವಂತೆ ಗುಪ್ತಾ ಅರ್ಜಿಯಲ್ಲಿ ಕೋರಿದ್ದಾರೆ.

 ಭಾರತ ಒಕ್ಕೂಟದ ನಿರ್ದೇಶದಂತೆ ಅಧಿಕಾರಿಗಳು ತಮ್ಮ ಪ್ರಾಮಾಣಿಕ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದರು,ಆದರೆ ಘಟನೆಯ ಮುಕ್ತ ಮತ್ತು ನಿಷ್ಪಕ್ಷ ತನಿಖೆಯನ್ನು ನಡೆಸಲು ರಚಿಸಲಾಗಿದ್ದ ಸಿಟ್ ಸಾರ್ವಜನಿಕ ಆಕ್ರೋಶವನ್ನು ಶಮನಗೊಳಿಸಲು ಮತ್ತು ಆಯ್ದ ಕೆಲವರ ಕಳವಳಗಳನ್ನು ನಿವಾರಿಸಲು ತನ್ನ ಮುಂದೆ ಲಭ್ಯವಿದ್ದ ಪುರಾವೆಗಳನ್ನು ಆಯ್ದು ಎತ್ತಿಕೊಳ್ಳುವ ಮೂಲಕ ಸಂಪೂರ್ಣವಾಗಿ ನಿರಂಕುಶ,ಏಕಪಕ್ಷೀಯ ಮತ್ತು ಕಾನೂನುಬಾಹಿರ ರೀತಿಯಲ್ಲಿ ವರ್ತಿಸಿದೆ ಎಂದು ಗುಪ್ತಾ ಅರ್ಜಿಯಲ್ಲಿ ಹೇಳಿದ್ದಾರೆ.

2021.ಡಿ.4ರಂದು ತಿರು-ಒಟಿಂಗ್ ಪ್ರದೇಶದಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ 14 ನಾಗರಿಕರು ಸೇನಾ ಸಿಬ್ಬಂದಿಗಳ ಗುಂಡಿಗೆ ಬಲಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News