200 ಕೋ.ಡೋಸ್ ದಾಟಿದ ಲಸಿಕೆ ನೀಡಿಕೆ: ವ್ಯಾಕ್ಸಿನೇಟರ್‌ಗಳ ಪ್ರಯತ್ನಗಳನ್ನು ಪ್ರಶಂಸಿಸಿ ಪ್ರಧಾನಿಯಿಂದ ಪತ್ರ

Update: 2022-07-20 16:10 GMT
Photo:PTI

ಹೊಸದಿಲ್ಲಿ,ಜು.20: ಭಾರತವು ತನ್ನ ಪ್ರಜೆಗಳಿಗೆ 200 ಕೋ.ಗೂ.ಅಧಿಕ ಕೋವಿಡ್ ಲಸಿಕೆ ಡೋಸ್‌ಗಳನ್ನು ನೀಡುವ ಮೂಲಕ ಮಹತ್ವದ ಮೈಲುಗಲ್ಲನ್ನು ದಾಟಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ವ್ಯಾಕ್ಸಿನೇಟರ್‌ಗಳಿಗೆ (ಲಸಿಕೆ ಹಾಕುವವರು) ಅವರ ಪ್ರಯತ್ನಗಳನ್ನು ಪ್ರಶಂಸಿಸಿ ಪತ್ರವೊಂದನ್ನು ಬರೆದಿದ್ದಾರೆ. ಸಾಂಕ್ರಾಮಿಕವು ಸ್ಫೋಟಗೊಂಡ ಬಳಿಕ ಬಿಕ್ಕಟ್ಟಿನ ಸಮಯದಲ್ಲಿ ತನ್ನ ದೃಢಸಂಕಲ್ಪವನ್ನು ಈಡೇರಿಸುವಲ್ಲಿ ಭಾರತದ ಸಾಧನೆಯ ಬಗ್ಗೆ ಮುಂಬರುವ ಪೀಳಿಗೆಗಳು ಹೆಮ್ಮೆ ಪಡಲಿವೆ ಎಂದು ಮೋದಿ ಒತ್ತಿ ಹೇಳಿದ್ದಾರೆ.

ಜನರ ಪ್ರಾಣರಕ್ಷಣೆಯು,ವಿಶೇಷವಾಗಿ ಶತಮಾನಕ್ಕೊಮ್ಮೆ ಜಾಗತಿಕ ಸಾಂಕ್ರಾಮಿಕವು ಭುಗಿಲೆದ್ದಾಗ ಮುಖ್ಯವಾಗಿದೆ. ದೇಶದ ಜನರನ್ನು ರಕ್ಷಿಸುವಲ್ಲಿ ವ್ಯಾಕ್ಸಿನೇಟರ್‌ಗಳು,ಆರೋಗ್ಯ ಕಾರ್ಯಕರ್ತರು,ಪೂರಕ ಸಿಬ್ಬಂದಿಗಳು ಮತ್ತು ಮುಂಚೂಣಿಯ ಕಾರ್ಯಕರ್ತರು ನಿರ್ಣಾಯಕ ಪಾತ್ರವನ್ನು ವಹಿಸಿದ್ದಾರೆ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.

ಕರ್ತವ್ಯಕ್ಕೆ ಸಮರ್ಪಣಾ ಮನೋಭಾವ ಮತ್ತು ಅತ್ಯಂತ ಅಗತ್ಯವಿದ್ದಾಗ ಅದನ್ನು ಒದಗಿಸುವುದಕ್ಕೆ ಇದು ಶ್ಲಾಘನೀಯ ಉದಾಹರಣೆಯಾಗಿದೆ ಎಂದಿದ್ದಾರೆ.

  ಅತ್ಯಂತ ತಣ್ಣನೆಯ ಪರ್ವತಗಳಿಂದ ಹಿಡಿದು ಸುಡುವ ಮರಳುಗಾಡುಗಳವರೆಗೆ,ಕುಗ್ರಾಮಗಳಿಂದ ಹಿಡಿದು ದಟ್ಟ ಅರಣ್ಯಗಳವರೆಗೆ ಕೋವಿಡ್ ಲಸಿಕೆ ಕಾರ್ಯಕ್ರಮವು ಯಾರನ್ನೂ ಬಿಟ್ಟಿಲ್ಲ ಮತ್ತು ಕೊನೆಯ ಹಂತದ ಪೂರೈಕೆಯಲ್ಲಿ ನವಭಾರತವು ಉತ್ತಮ ಸಾಧನೆಯನ್ನು ಮಾಡಿದೆ ಎನ್ನುವುದನ್ನು ತೋರಿಸಿದೆ ಎಂದು ಪತ್ರದಲ್ಲಿ ಬರೆದಿರುವ ಮೋದಿ,ವಿಶ್ವದ ಅತಿ ದೊಡ್ಡ ಲಸಿಕೆ ಕಾರ್ಯಕ್ರಮಕ್ಕೆ ಭಾರತವು ನೀಡಿದ ಪ್ರಮಾಣ ಮತ್ತು ವೇಗವು ಅದ್ಭುತವಾಗಿತ್ತು ಮತ್ತು ಇದು ನಿಮ್ಮಂತಹ ಜನರ ಪ್ರಯತ್ನಗಳಿಂದ ಸಾಧ್ಯವಾಗಿದೆ. ಈ ಐತಿಹಾಸಿಕ ಸಂದರ್ಭದಲ್ಲಿ ಭಾರತದ ಕೋವಿಡ್ ಲಸಿಕೆ ಕಾರ್ಯಕ್ರಮಕ್ಕೆ ನಿಮ್ಮ ಕೊಡುಗೆಯನ್ನು ಶ್ಲಾಘಿಸುತ್ತೇನೆ ಮತ್ತು ಇಂತಹ ಪ್ರಮುಖ,ಜೀವ ರಕ್ಷಕ ಅಭಿಯಾನದ ಮುಂಚೂಣಿಯಲ್ಲಿರುವುದಕ್ಕಾಗಿ ನಿಮ್ಮನ್ನು ಪ್ರಶಂಸಿಸುತ್ತೇನೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News