ಮಹಾರಾಷ್ಟ್ರ ಶಾಸಕರಿಗೆ ನೂರು ಕೋ.ರೂ.ಗೆ ಸಚಿವ ಸ್ಥಾನದ ಆಮಿಷವೊಡ್ಡಿದ್ದ ನಾಲ್ವರ ಸೆರೆ

Update: 2022-07-20 16:13 GMT

ಮುಂಬೈ,ಜು.20: ನೂರು ಕೋ.ರೂ.ನೀಡಿದರೆ ಸಚಿವ ಸ್ಥಾನ ಕೊಡಿಸುವುದಾಗಿ ಮಹಾರಾಷ್ಟ್ರ ಶಾಸಕರಿಗೆ ಆಮಿಷವೊಡ್ಡಿದ್ದ ಆರೋಪದಲ್ಲಿ ನಾಲ್ವರನ್ನು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ.

ರಾಜ್ಯದಲ್ಲಿ ಸಚಿವ ಸಂಪುಟದ ಸಂಭಾವ್ಯ ವಿಸ್ತರಣೆಗೆ ಮುನ್ನ ಈ ವಿದ್ಯಮಾನ ನಡೆದಿದೆ. ಸಂಪುಟ ವಿಸ್ತರಣೆಗೆ ಅಂತಿಮ ದಿನಾಂಕದ ಕುರಿತು ಇನ್ನೂ ಚರ್ಚೆ ನಡೆಯುತ್ತಿದೆಯಾದರೂ ಬಿಜೆಪಿಯ ಆಂತರಿಕ ಮೂಲಗಳು,ಪಕ್ಷದ ಕಾರ್ಯಸೂಚಿಯಲ್ಲಿ ಸಂಪುಟ ವಿಸ್ತರಣೆಯು ಆದ್ಯತೆಯನ್ನು ಪಡೆದಿದೆ ಮತ್ತು ಬಹುಶಃ ಜುಲೈ ನಾಲ್ಕನೇ ವಾರದಲ್ಲಿ ಅದು ನಡೆಯಲಿದೆ ಎಂದು ತಿಳಿಸಿವೆ.

ರಾಜಕೀಯ ಪರಿಸ್ಥಿತಿಯ ಲಾಭ ಪಡೆಯಲು ನಾಲ್ವರು ಆರೋಪಿಗಳು ಸಂಪುಟದಲ್ಲಿ ಸಚಿವ ಸ್ಥಾನಗಳನ್ನು ಕೊಡಿಸುವ ಹೆಸರಿನಲ್ಲಿ ಮೂವರು ಶಾಸಕರನ್ನು ವಂಚಿಸಲು ಯತ್ನಿಸಿದ್ದರು ಎಂದು ಮುಂಬೈ ಕ್ರೈಂ ಬ್ರಾಂಚ್ ಮೂಲಗಳು ಬುಧವಾರ ಸುದ್ದಿಸಂಸ್ಥೆಗೆ ತಿಳಿಸಿವೆ.

ರಿಯಾಝ್ ಶೇಖ್ (41),ಯೋಗೇಶ ಕುಲಕರ್ಣಿ (57),ಸಾಗರ ಸಂಗ್ವಾಯಿ (37) ಮತ್ತು ಝಾಫರ್ ಅಹ್ಮದ್ ಉಸ್ಮಾನಿ ಬಂಧಿತ ಆರೋಪಿಗಳಾಗಿದ್ದಾರೆ.

ಆರೋಪಿ ರಿಯಾಝ್ ಶಾಸಕ ರಾಹುಲ್ ಕುಲ್‌ರನ್ನು ಅವರ ಆಪ್ತ ಸಹಾಯಕನ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದ್ದ. ಆಪ್ತ ಸಹಾಯಕ ಕುಲ್ ಜೊತೆ ಮಾತನಾಡಿದ್ದು,ಬಳಿಕ ಅವರು ನರಿಮನ್ ಪಾಯಿಂಟ್‌ನಲ್ಲಿಯ ಹೋಟೆಲ್‌ವೊಂದರಲ್ಲಿ ತನ್ನನ್ನು ಭೇಟಿಯಾಗುವಂತೆ ರಿಯಾಝ್‌ಗೆ ತಿಳಿಸಿದ್ದರು. ಕುಲ್ ಸಚಿವ ಖಾತೆಯ ಬಗ್ಗೆ ಮಾತನಾಡಿದಾಗ ನಿಮಗೆ ರಿಯಾಯಿತಿ ಇದೆ,90 ಕೋ.ರೂ.ನೀಡಬೇಕು ಎಂದು ರಿಯಾಝ್ ಹೇಳಿದ್ದ ಎಂದು ಮೂಲಗಳು ತಿಳಿಸಿದವು. ಕುಲ್ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು,ಆರೋಪಿಯ ಬಂಧನಕ್ಕಾಗಿ ಪೊಲೀಸರು ಜಾಲ ಬೀಸಿದ್ದರು.

ಸೋಮವಾರ ಅಪರಾಹ್ನ ರಿಯಾಝ್ ಹೋಟೆಲ್‌ಗೆ ಆಗಮಿಸಿದಾಗ ಹೊಂಚು ಹಾಕಿದ್ದ ಪೊಲೀಸರು ಆತನನ್ನು ತಮ್ಮ ವಶಕ್ಕೆ ಪಡೆದಿದ್ದರು. ಹೋಟೆಲ್‌ನಲ್ಲಿ ಕುಲ್,ಅವರ ಸಹಾಯಕ ಮತ್ತು ಇನ್ನೋರ್ವ ಬಿಜೆಪಿ ಶಾಸಕ ಉಪಸ್ಥಿತರಿದ್ದರು.

ವಿಚಾರಣೆ ಸಂದರ್ಭ ರಿಯಾಝ್ ನೀಡಿದ ಮಾಹಿತಿಯಂತೆ ಸೋಮವಾರ ತಡರಾತ್ರಿ ಥಾಣೆಯಲ್ಲಿ ಕುಲಕರ್ಣಿ ಮತ್ತು ಸಂಗ್ವಾಯಿ ಅವರನ್ನು ಬಂಧಿಸಲಾಗಿದೆ. ಇವರಿಬ್ಬರು ನೀಡಿದ ಮಾಹಿತಿಯ ಆಧಾರದಲ್ಲಿ ಪೊಲೀಸರು ಮಂಗಳವಾರ ಬೆಳಿಗ್ಗೆ ಉಸ್ಮಾನಿಯನ್ನು ಬಂಧಿಸಿದ್ದಾರೆ. ನ್ಯಾಯಾಲಯವು ಎಲ್ಲ ನಾಲ್ವರು ಆರೋಪಿಗಳಿಗೆ ಪೊಲೀಸ್ ಕಸ್ಟಡಿ ವಿಧಿಸಿದೆ.

ಆರೋಪಿಗಳು ಇತರ ಯಾವುದೇ ವ್ಯಕ್ತಿಗಳಿಗೆ ವಂಚಿಸಿದ್ದಾರೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News