×
Ad

ಹಿರಿಯ ನಾಗರಿಕರಿಗೆ ರೈಲು ದರಗಳಲ್ಲಿ ವಿನಾಯಿತಿ ಮರು ಆರಂಭಿಸುವುದು ಅಪೇಕ್ಷಣೀಯವಲ್ಲ: ಕೇಂದ್ರ

Update: 2022-07-21 13:33 IST
ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಹಿರಿಯ ನಾಗರಿಕರಿಗೆ ರೈಲು ದರಗಳಲ್ಲಿ ನೀಡಲಾಗುತ್ತಿದ್ದ ರಿಯಾಯಿತಿಗಳನ್ನು ಮರುಆರಂಭಿಸುವುದು ಅಪೇಕ್ಷಣೀಯವಲ್ಲ ಎಂದು ಕೇಂದ್ರ ಸರಕಾರ ಬುಧವಾರ ಲೋಕಸಭೆಗೆ ತಿಳಿಸಿದೆ.

ಮಾರ್ಚ್ 2020 ರಲ್ಲಿ ಕೋವಿಡ್ ಸಾಂಕ್ರಾಮಿಕದ ಸಂದರ್ಭ ಹೇರಲಾಗಿದ್ದ ಲಾಕ್‍ಡೌನ್‍ಗೆ ಮುಂಚಿತವಾಗಿ ಹಿರಿಯ ನಾಗರಿಕರಿಗೆ ರೈಲು ದರಗಳಲ್ಲಿ ನೀಡಲಾಗುತ್ತಿದ್ದ ಶೇ 50ರಷ್ಟು ರಿಯಾಯಿತಿಯನ್ನು ಭಾರತೀಯ ರೈಲ್ವೆ ಅಂತ್ಯಗೊಳಿಸಿತ್ತು. ಕೋವಿಡ್ ಸೋಂಕು ಹಿರಿಯ ನಾಗರಿಕರಿಗೆ ಸುಲಭವಾಗಿ ಉಂಟಾಗಬಹುದಾಗಿರುವುದರಿಂದ ಅವರನ್ನು ಪ್ರಯಾಣಿಸುವುದರಿಂದ ನಿರುತ್ತೇಜಿಸಲು ಈ ಕ್ರಮಕೈಗೊಳ್ಳಲಾಗಿದೆ ಎಂದು ಆಗ ಅಧಿಕಾರಿಗಳು ಹೇಳಿದ್ದರು.

ಹಿರಿಯ ನಾಗರಿಕರಿಗೆ ನೀಡುತ್ತಿದ್ದ ರಿಯಾಯಿತಿಗಳನ್ನು ಕೈಬಿಡಲು ಭಾರತೀಯ ರೈಲ್ವೆ ಅನುಭವಿಸುತ್ತಿರುವ ನಷ್ಟ ಕಾರಣ ಎಂದು ಬುಧವಾರ ಪ್ರಶ್ನೆಯೊಂದಕ್ಕೆ ಉತ್ತರಿಸುವ ವೇಳೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ವಿವಿಧ ವರ್ಗಗಳ ಪ್ರಯಾಣಿಕರಿಗೆ ನೀಡಲಾಗುತ್ತಿದ್ದ ರಿಯಾಯಿತಿಗಳು ಹಾಗೂ ಕಡಿಮೆ ದರಗಳಿಂದ ರೈಲ್ವೆ ಸತತ ನಷ್ಟ ಅನುಭವಿಸುತ್ತಿದೆ ಎಂದು ಅವರು ಹೇಳಿದ್ದಾರೆ. "ಕಡಿಮೆ ದರದ ಹಿನ್ನೆಲೆಯಲ್ಲಿ ಪ್ರತಿ ಪ್ರಯಾಣಿಕನ ಸರಾಸರಿ ಶೇ 50ರಷ್ಟು  ಪ್ರಯಾಣ ವೆಚ್ಚವನ್ನು ರೈಲ್ವೆ ಈಗಾಗಲೇ ಭರಿಸುತ್ತಿದೆ, ಸಾಂಕ್ರಾಮಿಕದಿಂದಲೂ ನಷ್ಟ ಉಂಟಾಗಿದೆ, ಹೀಗಿರುವಾಗ ಹಿರಿಯ ನಾಗರಿಕರ ಸಹಿತ ಎಲ್ಲಾ ವರ್ಗಗಳ ಪ್ರಯಾಣಿಕರಿಗೆ ರಿಯಾಯಿತಿಗಳನ್ನು ನೀಡುವುದು ಸಾಧ್ಯವಾಗದು,'' ಎಂದು ಸಚಿವರು ತಿಳಿಸಿದ್ದಾರೆ.

ಭಾರತೀಯ ರೈಲ್ವೆ 2017-18ರಲ್ಲಿ ರೂ. 1,491 ಕೋಟಿ ನಷ್ಟ, 2018-19ರಲ್ಲಿ ರೂ. 1,636 ಕೋಟಿ ನಷ್ಟ ಹಾಗೂ 2019-20 ರಲ್ಲಿ ರೂ. 1,667 ಕೋಟಿ ನಷ್ಟ ಅನುಭವಿಸಿದೆ ಎಂಬ ಅಂಕಿಅಂಶವನ್ನೂ ಸಚಿವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News