×
Ad

ಹೃದಯ ಶಸ್ತ್ರಕ್ರಿಯೆಗಾಗಿ ಅಮೆರಿಕದಿಂದ ಬೆಂಗಳೂರು ಮೂಲದ ಮಹಿಳೆಯ ಏರ್ ಲಿಫ್ಟ್

Update: 2022-07-21 14:03 IST
ಸಾಂದರ್ಭಿಕ ಚಿತ್ರ 

ಹೊಸದಿಲ್ಲಿ: ಅತ್ಯಂತ ಗಂಭೀರ ಹೃದಯದ ಸಮಸ್ಯೆಯಿಂದ ಬಳಲುತ್ತಿರುವ 67 ವರ್ಷದ ಬೆಂಗಳೂರು ಮೂಲದ ಮಹಿಳೆಯೊಬ್ಬರನ್ನು ಅಮೆರಿಕಾದ ಪೋರ್ಟ್‍ಲ್ಯಾಂಡ್‍ನಿಂದ ಚೆನ್ನೈಗೆ 26 ಗಂಟೆ ಅವಧಿಯ ಪ್ರಯಾಣದಲ್ಲಿ ಏರ್‍ಲಿಫ್ಟ್ ಮಾಡಲಾಗಿದೆ. ಇತರ ದೇಶಗಳಿಂದ ಭಾರತಕ್ಕೆ ಇಷ್ಟು ದೂರ ಕ್ರಮಿಸಿ ವೈದ್ಯಕೀಯ ಕಾರಣಗಳಿಗಾಗಿ ರೋಗಿಯನ್ನು ಏರ್ ಲಿಫ್ಟ್ ಮಾಡಿದ ಮೊದಲ ಪ್ರಕರಣ ಇದಾಗಿದೆ.

ಮಹಿಳೆ ಪೋರ್ಟ್‍ಲ್ಯಾಂಡ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಆಕೆಯ ಓರೆಗಾನ್‍ನಲ್ಲಿರುವ ಕುಟುಂಬ ಹೃದಯ ಶಸ್ತ್ರಕ್ರಿಯೆಗಾಗಿ ಆಕೆಯನ್ನು ಚೆನ್ನೈನ ಅಪೋಲೋ ಆಸ್ಪತ್ರೆಗೆ ಕರೆತರಲು ನಿರ್ಧರಿಸಿ ವಿಮಾನ ವೆಚ್ಚಕ್ಕಾಗಿ 133,000 ಡಾಲರ್ (ಅಂದಾಜು ರೂ. 1 ಕೋಟಿ) ವ್ಯಯಿಸಿದೆ.

ಬೆಂಗಳೂರು ಮೂಲದ ಏರ್ ಅಂಬುಲೆನ್ಸ್ ಸೇವೆ ಐಸಿಎಟಿಟಿಯನ್ನು ಕುಟುಂಬ ಬಳಸಿತ್ತು. ಈ ವಿಮಾನದಲ್ಲಿ ಐಸಿಯು ಕೂಡ ಇದೆ.

ರೋಗಿಯನ್ನು ಕರೆತರಲು ಪೋರ್ಟ್‍ಲ್ಯಾಂಡ್‍ನಿಂದ ಟರ್ಕಿಗೆ ಆಗಮಿಸಲು ಒಂದು ಖಾಸಗಿ ಜೆಟ್ ಬಳಸಲಾಯಿತಾದರೆ ಇಸ್ತಾಂಬುಲ್‍ನಿಂದ ಚೆನ್ನೈಗೆ ಬರಲು ಇನ್ನೊಂದು ಜೆಟ್ ಬಳಸಲಾಯಿತು. ಮೊದಲ ಜೆಟ್‍ನಲ್ಲಿ ಮೂವರು ವೈದ್ಯರು ಮತ್ತು ಇಬ್ಬರು ಅರೆವೈದ್ಯಕೀಯ ಸಿಬ್ಬಂದಿ ಇದ್ದರು ಏಳೂವರೆ ಗಂಟೆ ಪ್ರಯಾಣದ ಬಳಿಕ ಐಸ್‍ಲ್ಯಾಂಡ್‍ನ ರೇಕ್ಜವಿಕ್ ನಿಲ್ದಾಣದಲ್ಲಿ ಇಂಧನ ತುಂಬಿಸಿ ವಿಮಾನ ಇಸ್ತಾಂಬುಲ್‍ಗೆ ಹಾರಿತು. ಅಲ್ಲಿ ವೈದ್ಯಕೀಯ ಸಿಬ್ಬಂದಿಯುನ್ನು ಇಳಿಸಲಾಯಿತು ಹಾಗೂ ಬೆಂಗಳೂರಿನಿಂದ ಈ ಉದ್ದೇಶಕ್ಕೆಂದೇ ಅಮೆರಿಕಾಗೆ ತೆರಳಿದ್ದ ವೈದ್ಯರು ರೋಗಿಯ ಆರೈಕೆಗಾಗಿ ಸಿದ್ಧರಿದ್ದರು. ಆಕೆಯನ್ನು ಇನ್ನೊಂದು ಜೆಟ್‍ಗೆ ವರ್ಗಾಯಿಸಿ ವಿಮಾನ ಅಲ್ಲಿಂದ ಹೊರಟು ಮೊದಲ ನಿಲುಗಡೆ ಟರ್ಕಿಯ ಇನ್ನೊಂದು ವಿಮಾನ ನಿಲ್ದಾಣವಾದ ದಿಯಾರ್‍ಬಕಿರ್ ಏರ್‍ಪೋರ್ಟ್ ತಲುಪಿತ್ತು. ಅಲ್ಲಿಂದ ಮಂಗಳವಾರ ಬೆಳಿಗ್ಗೆ ವಿಮಾನ ಚೆನ್ನೈಗೆ ತಲುಪಿತ್ತು. ತಕ್ಷಣ ಆ್ಯಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ರೋಗಿಯನ್ನು ಸಾಗಿಸಿ ಶಸ್ತ್ರಕ್ರಿಯೆಗೆ ಏರ್ಪಾಟು ಮಾಡಲಾಗಿದೆ.

ಅಮೆರಿಕಾದಲ್ಲಿ ಚಿಕಿತ್ಸೆ ಅವಧಿ ದೀರ್ಘವಾಗಿದೆ ಹಾಗೂ ರೋಗಿಯನ್ನು ಭಾರತಕ್ಕೆ ಏರ್‍ಲಿಫ್ಟ್ ಮಾಡುವುದಕ್ಕಿಂತಲೂ ಹೆಚ್ಚು ವೆಚ್ಚವಾಗುತ್ತದೆ ಎಂಬ ಕಾರಣಕ್ಕೆ ಹಾಗೂ ರೋಗಿ ಮಹಿಳೆ ಭಾರತೀಯ ಪಾಸ್‍ಪೋರ್ಟ್ ಹೊಂದಿರುವವರಾಗಿರುವುದರಿಂದ ವೈದ್ಯಕೀಯ ವಿಮೆ ಕ್ಲೇಮ್ ಮಾಡುವಲ್ಲಿಯೂ ತೊಡಕುಂಟಾಗಿದ್ದರಿಂದ ಚೆನ್ನೈಗೆ ಏರ್‍ಲಿಫ್ಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಇಂದಿರಾನಗರ ನಿವಾಸಿಯಾಗಿರುವ ಮಹಿಳೆ ಈ ಹಿಂದೆ ಪೋರ್ಟ್‍ಲ್ಯಾಂಡ್‍ನ ಲೆಗಸಿ ಗುಡ್ ಸಮಾರಿಟನ್ ಮೆಡಿಕಲ್ ಸೆಂಟರ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News