ಅನ್ಯಾಯದ ವಿರುದ್ಧ ರಾಜಿರಹಿತ ಹೋರಾಟಗಾರ, ಮಾನವತಾವಾದಿ ಜಿ.ರಾಜಶೇಖರ್ ನಿಧನ ಮಹಾನಷ್ಟ: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ
ಉಡುಪಿ : ಅನ್ಯಾಯದ ವಿರುದ್ಧ ದಿಟ್ಟ ನಿಲುವಿನ ಹೋರಾಟಗಾರ, ಚಿಂತಕ, ಲೇಖಕ ಜಿ.ರಾಜಶೇಖರ್ ನಿಧನ ಮಹಾನಷ್ಟ ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಮಾಧ್ಯಮಕ್ಕೆ ನೀಡಿದ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಮರ್ಧಿತರ ಬಗೆ ಅತೀವ ಕಳಕಳಿಯು ಅವರನ್ನು ಯೌವನದಲ್ಲೇ ರೈತ, ಕಾರ್ಮಿಕ ಚಳುವಳಿಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುವಂತೆ ಮಾಡಿತು. ಅವರ ಸಂಘರ್ಷವು ದುಡಿಯುವ ಜನವರ್ಗಕ್ಕೆ ಸೀಮಿತವಾಗಿ ಉಳಿಯದೆ ಕರ್ನಾಟಕದಲ್ಲಿ ಕೋಮು ಹಿಂಸೆಯ ರಾಜಕೀಯ ತಲೆ ಎತ್ತಿದಾಗ ಅದರ ವಿರುದ್ಧದ ಹೋರಾಟಕ್ಕೆ ಧ್ವನಿಯಾದರು.
ಮಾನವತಾವಾದಿಯಾದ ಅವರು ದಲಿತ ದಮನಿತರು, ಅಲ್ಪಸಂಖ್ಯಾತರು ಇನ್ನಿತರ ಅಂಚಿಗೆ ತಳ್ಳಲ್ಪಟ್ಟವರ ಹೋರಾಟದ ಪ್ರೇರಕ ಶಕ್ತಿಯಾದರು. ಸರಳ ಜೀವನ ನಡೆಸುತ್ತಿದ್ದ ಅವರು ಎಲ್ಲೆ ಮಾನವ ಹಕ್ಕುಗಳು ದಮನ ಆದಾಗ ಅದರ ವಿರುದ್ಧ ಧ್ವನಿ ಎತ್ತುತ್ತಿದ್ದರು. ಅದ್ದರಿಂದಲೇ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟವು ತನ್ನ ಚೊಚ್ಚಲ ಮಾನವರತ್ನ ಪ್ರಶಸ್ತಿ ಕೊಡಲು ಉದ್ದೇಶಿಸಿದಾಗ ಒಕ್ಕೊರಲಿನಿಂದ ಬಂದ ಹೆಸರೇ ಜಿ.ರಾಜಶೇಖರ್ ಅವರದು.
ಯಾವುದೇ ಪ್ರಶಸ್ತಿ ಸನ್ಮಾನಗಳನ್ನು ನಿರಾಕರಿಸಿ ದೂರವಿರುತ್ತಿದ್ದ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದು ಒಕ್ಕೂಟದ ಅದೃಷ್ಟ ಮತ್ತು ಆ ಪ್ರಶಸ್ತಿಗೇ ಸಿಕ್ಕ ಗೌರವ ಎಂದು ಒಕ್ಕೂಟ ಭಾವಿಸುತ್ತದೆ. ಜಿ. ರಾಜಶೇಖರ್ ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಹೋರಾಟ ಮತ್ತು ಆದರ್ಶಗಳು ಅವರ ಹಾದಿಯಲ್ಲಿರುವ ಎಲ್ಲರಿಗೂ ಸದಾ ಮಾದರಿಯಾಗಿರುತ್ತದೆ. ಅವರ ಕುಟುಂಬಸ್ಥರಿಗೆ ದುಃಖವನ್ನು ಸಹಿಸುವ ಶಕ್ತಿ ಲಭಿಸಲಿ ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ ತಿಳಿಸಿದ್ದಾರೆ.