ವಲಸಿಗ ಕಾರ್ಮಿಕರು ದೇಶಕ್ಕೆ ಮುಖ್ಯ, ಅವರೆಲ್ಲರಿಗೂ ರೇಷನ್ ಕಾರ್ಡ್ ಒದಗಿಸಬೇಕು: ಸುಪ್ರೀಂಕೋರ್ಟ್

Update: 2022-07-22 11:14 GMT

ಹೊಸದಿಲ್ಲಿ: ವಲಸಿಗ ಕಾರ್ಮಿಕರು ದೇಶ ನಿರ್ಮಾಣ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಅವರ ಹಕ್ಕುಗಳನ್ನು ಅವಗಣಿಸಲಾಗದು, ಅವರಿಗೆ ರೇಷನ್ ಕಾರ್ಡ್‍ಗಳನ್ನು ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರಗಳು ಮತ್ತು ಕೇಂದ್ರ ಸರಕಾರ ಶ್ರಮಿಸಬೇಕು, ಈ ದೇಶದಲ್ಲಿ ಹಸಿವಿನಿಂದಾಗಿ ಯಾವುದೇ ನಾಗರಿಕ ಸಾಯುವಂತಾಗಬಾರದು ಎಂದು ನ್ಯಾಯಾಲಯ ಹೇಳಿದೆ.

ಕೋವಿಡ್ ಸಾಂಕ್ರಾಮಿಕದ ನಂತರ ವಲಸಿಗ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತಂತೆ ನ್ಯಾಯಾಲಯ ದಾಖಲಿಸಿದ್ದ ಸ್ವಯಪ್ರೇರಿತ ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಂ.ಆರ್ ಶಾ ಮತ್ತು ಬಿ.ವಿ ನಾಗರತ್ನ ಅವರ ಪೀಠ ನಡೆಸುವ ವೇಳೆ ಮೇಲಿನಂತೆ ಹೇಳಿದೆ.

ವಿಚಾರಣೆ ವೇಳೆ ಮಾತನಾಡಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಟಿ, ಇ-ಶ್ರಮ್ ವೆಬ್ ತಾಣದಲ್ಲಿ ವಲಸಿಗ ಕಾರ್ಮಿಕರನ್ನು ನೋಂದಣಿ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ. ಕೆಲ ಸರಕಾರಿ ಯೋಜನೆಗಳ ಪ್ರಯೋಜನವನ್ನು ಈ ಮೂಲಕ ಅವರು ಪಡೆದುಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು.

ನೋಂದಣಿ ಮಾಡಿಕೊಳ್ಳಲು ಕಾರ್ಮಿಕರಿಗೆ ಪ್ರೋತ್ಸಾಹಿಸಲಾಗುತ್ತಿದೆ ಮತ್ತು ಈ ನಿಟ್ಟಿನಲ್ಲೀ ಶಿಬಿರಗಳನ್ನು ಆಯೋಜಿಸಳಾಗುತ್ತಿದೆ ಎಂದೂ ಅವರು ಹೇಳಿದರು.

ಈ ಸಂದರ್ಭ ಮಾತನಾಡಿದ ಜಸ್ಟಿಸ್ ಶಾ ನಮ್ಮ ದೇಶದಲ್ಲಿ ಇಬ್ಬರು ವ್ಯಕ್ತಿಗಳು ಬಹಳ ಮುಖ್ಯ, ರೈತರು ಮತ್ತು ವಲಸಿಗ ಕಾರ್ಮಿಕರು, ಬಾಯಾರಿದವರು ಬಾವಿ ಬಳಿ ಹೋಗಲು ಸಾಧ್ಯವಿಲ್ಲದೇ ಇದ್ದರೆ ಬಾವಿಯೇ ಅಗತ್ಯವಿರುವ ಜನರ ಬಳಿಗೆ ಹೋಗಬೇಕು, ಸರಕಾರ ಕಾರ್ಮಿಕರನ್ನು ನೇಮಕಗೊಳಿಸುವ ಗುತ್ತಿಗೆದಾರರನ್ನು ಸಂಪರ್ಕಿಸಬೇಕು ಹಾಗೂ ಪ್ರಯೋಜನಗಳು ಕಾರ್ಮಿಕರನ್ನು ತಲುಪುವಂತೆ ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.

ಹೆಚ್ಚಿನ ಸಂಖ್ಯೆಯ ವಲಸಿಗ ಕಾರ್ಮಿಕರಿಗೆ ರೇಷನ್ ಕಾರ್ಡುಗಳು ದೊರಕಿಲ್ಲ, ರಾಷ್ಟ್ರೀಯ ಆಹಾರ ಭದ್ರತೆ ಕಾಯಿದೆಯಡಿ ಯಾರನ್ನು ಒಳಪಡಿಸಬೇಕೆಂಬುದನ್ನು ಸರಕಾರ ಮರುಪರಾಮರ್ಶಿಸಿಲ್ಲ ಎಂದು ವಕೀಲ ಪ್ರಶಾಂತ್ ಭೂಷಣ್ ಹೇಳಿದರು.

"ಯಾರೂ ಹಸಿವಿನಿಂದ ಸಾಯಬಾರದು. ಆದರೆ ಹಾಗಾಗುತ್ತಿದೆ. ಗ್ರಾಮಗಳಲ್ಲಿ ಜನರು ಹೊಟ್ಟೆಗೆ ಗಟ್ಟಿಯಾಗಿ ಬಟ್ಟೆ ಕಟ್ಟಿ ನೀರು ಕುಡಿದು  ಮಲಗುತ್ತಾರೆ. ಅವರು ಹಸಿವನ್ನು ಕೊಲ್ಲಲು ಬಟ್ಟೆಯನ್ನು ಹೊಟ್ಟೆಗೆ ಗಟ್ಟಿಯಾಗಿ ಕಟ್ಟುತ್ತಾರೆ" ಎಂದು ಜಸ್ಟಿಸ್ ನಾಗರತ್ನ ಹೇಳಿದರು. ಪ್ರಕರಣದ ವಿಚಾರಣೆ ಎರಡು ವಾರಗಳ ನಂತರ ಮುಂದುವರಿಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News