ದಿಲ್ಲಿ: ನೂತನ ಅಬಕಾರಿ ನೀತಿ ಕುರಿತು ತನಿಖೆಗೆ ಲೆಫ್ಟಿನೆಂಟ್ ಗವರ್ನರ್ ಶಿಫಾರಸಿನಲ್ಲಿ ಉಪಮುಖ್ಯಮಂತ್ರಿ ಹೆಸರು

Update: 2022-07-22 16:30 GMT

ಹೊಸದಿಲ್ಲಿ,ಜು.22: ದಿಲ್ಲಿಯ ಲೆಫ್ಟಿನಂಟ್ ಗವರ್ನರ್ ವಿನಯ್ ಸಕ್ಸೇನಾ ಅವರು ಅರವಿಂದ ಕೇಜ್ರಿವಾಲ್ ನೇತೃತ್ವದ ಆಪ್ ಸರಕಾರದ ವಿವಾದಾತ್ಮಕ ನೂತನ ಅಬಕಾರಿ ನೀತಿಯ ಕುರಿತು ಸಿಬಿಐ ತನಿಖೆಗೆ ಶುಕ್ರವಾರ ಶಿಫಾರಸು ಮಾಡಿದ್ದಾರೆ. ಇದರೊಂದಿಗೆ ಕೇಂದ್ರದ ಬಿಜೆಪಿ ಮತ್ತು ಆಪ್ ನಡುವೆ ಹೊಸ ಕಾಳಗಕ್ಕೆ ರಂಗ ಸಜ್ಜುಗೊಂಡಿದೆ.

ಮುಖ್ಯ ಕಾರ್ಯದರ್ಶಿಗಳು ಜು.8ರಂದು ಸಲ್ಲಿಸಿರುವ ವರದಿಯು ಮದ್ಯ ಪರವಾನಿಗೆದಾರರಿಗೆ ಟೆಂಡರ್ ಬಳಿಕ ಅನಗತ್ಯ ಲಾಭಗಳನ್ನು ಒದಗಿಸಲು ಉದ್ದೇಶಪೂರ್ವಕ ಮತ್ತು ಸಾರಾಸಗಟು ವಿಧಿವಿಧಾನ ಲೋಪಗಳ ಜೊತೆಗೆ ಸ್ಥಾಪಿತ ಕಾನೂನಿನ ಹಲವಾರು ಉಲ್ಲಂಘನೆಗಳನ್ನು ಬೆಟ್ಟು ಮಾಡಿದೆ ಎಂದು ಸಕ್ಸೇನಾರ ಕಚೇರಿಯು ಹೊರಡಿಸಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

ದಿಲ್ಲಿಯ ಉಪಮುಖ್ಯಮಂತ್ರಿ ಮನೀಷ ಸಿಸೋಡಿಯಾ ಅವರನ್ನು ನೇರವಾಗಿ ಹೆಸರಿಸಿರುವ ಸಕ್ಸೇನಾ,ವರದಿಯು ಉನ್ನತ ರಾಜಕೀಯ ಮಟ್ಟದಲ್ಲಿ ‘ಗಣನೀಯ’ ಹಣಕಾಸು ಅನುಕೂಲಗಳನ್ನು ಸೂಚಿಸಿದೆ ಎಂದು ಹೇಳಿದ್ದಾರೆ. ಸಿಸೋದಿಯಾವರೆಗೆ ಸರಕಾರದ ಉನ್ನತ ಮಟ್ಟದ ವ್ಯಕ್ತಿಗಳಿಗೆ ಹಣಕಾಸು ಲಾಭಕ್ಕಾಗಿ ಖಾಸಗಿ ಮದ್ಯದ ದೊರೆಗಳಿಗೆ ಅನುಕೂಲಗಳನ್ನು ಒದಗಿಸುವ ಏಕೈಕ ಉದ್ದೇಶದಿಂದ ನೂತನ ಅಬಕಾರಿ ನೀತಿಯನ್ನು ಜಾರಿಗೊಳಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಅಬಕಾರಿ ಇಲಾಖೆಯ ಉಸ್ತುವಾರಿಯಾಗಿರುವ ಸಿಸೋದಿಯಾ ಶಾಸನಬದ್ಧ ನಿಬಂಧನೆಗಳು ಮತ್ತು ಅಧಿಸೂಚಿತ ಅಬಕಾರಿ ನೀತಿಯನ್ನು ಉಲ್ಲಂಘಿಸಿ ಭಾರೀ ಆರ್ಥಿಕ ಪರಿಣಾಮಗಳನ್ನು ಹೊಂದಿರುವ ಪ್ರಮುಖ ನಿರ್ಧಾರಗಳನ್ನು/ಕ್ರಮಗಳನ್ನು ಕೈಗೊಂಡಿದ್ದಾರೆ ಮತ್ತು ಅವುಗಳನ್ನು ಕಾರ್ಯಗತಗೊಳಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ಸಕ್ಸೇನಾ,ಟೆಂಡರ್ಗಳ ಹಂಚಿಕೆಯ ಬಹಳ ಸಮಯದ ಬಳಿಕ ಪರವಾನಿಗೆದಾರರಿಗೆ ಅನಗತ್ಯ ಹಣಕಾಸು ಅನುಕೂಲಗಳನ್ನು ಒದಗಿಸುವ ಮೂಲಕ ಸಿಸೋದಿಯಾ ಸರಕಾರದ ಖಜಾನೆಗೆ ಭಾರೀ ನಷ್ಟವನ್ನುಂಟು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಪಕ್ಷದ ಹೆಚ್ಚುತ್ತಿರುವ ಜನಪ್ರಿಯತೆಯನ್ನು ತಡೆಯಲು ಹತಾಶಗೊಂಡಿರುವ ಕೇಂದ್ರದ ನಿರ್ದೇಶದ ಮೇರೆಗೆ ಲೆ.ಗ.ಕಾರ್ಯಾಚರಿಸುತ್ತಿದ್ದಾರೆ ಎಂದು ಆಪ್ ಪ್ರತಿಪಾದಿಸಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಪಕ್ಷ ಕೇಜ್ರಿವಾಲ್ ಮತ್ತು ಆಪ್ನ ಇತ್ತೀಚಿನ ಚುನಾವಣಾ ಯಶಸ್ಸಿನ ಬಗ್ಗೆ ಅಸೂಯೆ ಹೊಂದಿದ್ದಾರೆ ಮತ್ತು ಅವರನ್ನು ತಡೆಯಲು ಏನು ಬೇಕಾದರೂ ಮಾಡುತ್ತಾರೆ ಎಂದು ಆಪ್ನ ವಕ್ತಾರ ಸೌರಭ ಭಾರದ್ವಾಜ್ ಹೇಳಿದರು.

ನೂತನ ಅಬಕಾರಿ ನೀತಿ 2021-22ನ್ನು ಕಳೆದ ವರ್ಷದ ನ.17ರಿಂದ ಜಾರಿಗೊಳಿಸಿದ್ದು,ಇದರಡಿ ದಿಲ್ಲಿಯ 32 ವಲಯಗಳಲ್ಲಿ 849 ಮದ್ಯದಂಗಡಿಗಳನ್ನು ತೆರೆಯಲು ಖಾಸಗಿ ಬಿಡ್ಡರ್ಗಳಿಗೆ ಚಿಲ್ಲರೆ ಪರವಾನಿಗೆಗಳನ್ನು ನೀಡಲಾಗಿತ್ತು.

ನೂತನ ಅಬಕಾರಿ ನೀತಿಯನ್ನು ಬಲವಾಗಿ ವಿರೋಧಿಸಿದ್ದ ಬಿಜೆಪಿ ಮತ್ತು ಕಾಂಗ್ರೆಸ್ ಈ ಕುರಿತು ತನಿಖೆಗಾಗಿ ಲೆ.ಗ. ಮತ್ತು ಕೇಂದ್ರೀಯ ಸಂಸ್ಥೆಗಳಿಗೆ ದೂರು ಸಲ್ಲಿಸಿದ್ದವು..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News