ವಿಶ್ವಾದ್ಯಂತ 16 ಕೋಟಿ ಮಹಿಳೆಯರಿಗೆ ಗರ್ಭನಿರೋಧಕ ಲಭಿಸಿಲ್ಲ: ವರದಿ

Update: 2022-07-22 16:50 GMT

ಲಂಡನ್, ಜು.22: 1970ರಿಂದ ಜಾಗತಿಕ ಮಟ್ಟದಲ್ಲಿ ಬಳಕೆ ಹೆಚ್ಚಿದ ಹೊರತಾಗಿಯೂ , 2019ರಲ್ಲಿ ಗರ್ಭಧಾರಣೆಯನ್ನು ತಡೆಯುವ ಅಗತ್ಯವಿರುವ 16 ಕೋಟಿಗೂ ಹೆಚ್ಚಿನ ಮಹಿಳೆಯರು ಮತ್ತು ಹದಿಹರೆಯದವರು ಗರ್ಭನಿರೋಧಕ ವ್ಯವಸ್ಥೆಯಿಂದ ವಂಚಿತವಾಗಿದ್ದಾರೆ ಎಂದು ಲ್ಯಾನ್ಸೆಟ್ ಜರ್ನಲ್ನಲ್ಲಿ ಪ್ರಕಟವಾದ ವರದಿ ಹೇಳಿದೆ.

ಗರ್ಭನಿರೋಧಕ ವ್ಯವಸ್ಥೆಯನ್ನು ಸುಲಭದಲ್ಲಿ ಲಭ್ಯವಾಗಿಸುವುದು ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣ ಮತ್ತು ಉತ್ತಮ ಆರೋಗ್ಯ ಫಲಿತಾಂಶಗಳಿಗೆ ಸಂಬಂಧಿಸಿದೆ ಮತ್ತು ಇದು ಅಂತರಾಷ್ಟ್ರೀಯ ಉಪಕ್ರಮಗಳ ಪ್ರಮುಖ ಗುರಿಯಾಗಿದೆ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಯ ಸೂಚಕವಾಗಿದೆ. ಗರ್ಭನಿರೋಧಕ ಬಳಕೆಯು ಅನಪೇಕ್ಷಿತ ಗರ್ಭಧಾರಣೆಯನ್ನು ತಡೆಗಟ್ಟುವ ಮೂಲಕ ತಾಯಿಯ ಮತ್ತು ನವಜಾತ ಶಿಶುಗಳ ಮರಣದ ಇಳಿಕೆಗೆ ಸಂಬಂಧಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮಹಿಳೆಯರ ಗರ್ಭನಿರೋಧಕ ಬಳಕೆಯ ಬಗ್ಗೆ ನಡೆಸಿದ ಸಮೀಕ್ಷೆಗೆ ಸಂಬಂಧಿಸಿದ 1,162 ವರದಿಗಳ ಅಂಕಿಅಂಶವನ್ನು ಆಧರಿಸಿ ಸಂಶೋಧಕರು ವಿವಿಧ ಕುಟುಂಬ ಯೋಜನೆ ಸೂಚಕಗಳನ್ನು ಬಳಸಿ ಈ ವರದಿ ತಯಾರಿಸಿದ್ದಾರೆ.

ವಿವಾಹಿತ ಅಥವಾ ಅವಿವಾಹಿತ ಮಹಿಳೆಯರು, ಲೈಂಗಿಕವಾಗಿ ಸಕ್ರಿಯವಾಗಿದ್ದರೆ, ಗರ್ಭಿಣಿಯಾಗಲು ಸಮರ್ಥವಾಗಿದ್ದರೆ ಮತ್ತು 2 ವರ್ಷದೊಳಗೆ ಮಗು ಬೇಡ ಎಂದು ಬಯಸಿದರೆ, ಗರ್ಭಿಣಿಯಾಗಿದ್ದರೆ ಅಥವಾ ತಮ್ಮ ಗರ್ಭಧಾರಣೆಯನ್ನು ತಡೆಯಲು ಅಥವಾ ವಿಳಂಬಿಸಲು ಆದ್ಯತೆ ನೀಡಿದರೆ ಅಂತವರಿಗೆ ಗರ್ಭನಿರೋಧಗಳ ಅಗತ್ಯವಿದೆ ಎಂದು ವ್ಯಾಖ್ಯಾನಿಸಲಾಗಿದೆ.

ವಿಶ್ವದಾದ್ಯಂತ ಆಧುನಿಕ ಗರ್ಭನಿರೋಧಕವನ್ನು ಬಳಸುವ ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರ ಪ್ರಮಾಣ 1970ರಲ್ಲಿ 28% ಇದ್ದರೆ 2019ರಲ್ಲಿ 48%ಕ್ಕೆ ಏರಿದೆ. ಬೇಡಿಕೆಯ ಈಡೇರಿಕೆ 1970ರಲ್ಲಿ 55% ಇದ್ದರೆ 2019ರಲ್ಲಿ 79%ಕ್ಕೆ ಹೆಚ್ಚಿದೆ. ಈ ಹೆಚ್ಚಳದ ಹೊರತಾಗಿಯೂ, ಪ್ರಸ್ತುತ ಗರ್ಭನಿರೋಧಕ ಬಳಸದ 16 ಕೋಟಿಗೂ ಅಧಿಕ ಮಹಿಳೆಯರಿಗೆ 2019ರಲ್ಲಿ ಅದರ ಅಗತ್ಯವಿತ್ತು ಎಂದು ಸಂಶೋಧಕರು ಹೇಳಿದ್ದಾರೆ. 1970ರಿಂದ ಜಾಗತಿಕ ಮಟ್ಟದಲ್ಲಿ ಗರ್ಭನಿರೋಧಕ ವ್ಯವಸ್ಥೆಯ ಲಭ್ಯತೆಯಲ್ಲಿ ಅತ್ಯುತ್ತಮ ಪ್ರಗತಿ

ಸಾಧ್ಯವಾಗಿದ್ದರೂ, ಗರ್ಭನಿರೋಧಕಗಳಿಂದ ಲಭಿಸುವ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣದ ಪ್ರಯೋಜನ ಎಲ್ಲಾ ಮಹಿಳೆಯರು ಮತ್ತು ಹದಿಹರೆಯದವರಿಗೆ ದೊರಕಬೇಕಿದ್ದರೆ ಇನ್ನೂ ಬಹಳಷ್ಟು ದೂರ ಸಾಗಬೇಕಿದೆ.

ಮಹಿಳೆ ವಾಸಿಸುವ ಸ್ಥಳ ಮತ್ತು ಅವರ ವಯಸ್ಸು ಇನ್ನೂ ಗರ್ಭನಿರೋಧಕ ಬಳಕೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ ಎಂಬುದು ನಮ್ಮ ಅಧ್ಯಯನದಿಂದ ತಿಳಿದುಬಂದಿದೆ ಎಂದು ವಾಷಿಂಗ್ಟನ್ ವಿವಿಯ ಆ್ಯನಿ ಹ್ಯಾಕೆನ್ಸ್ಟಡ್ ಹೇಳಿದ್ದಾರೆ. 2019ರಲ್ಲಿ ಗರ್ಭನಿರೋಧಕಗಳ ಲಭ್ಯತೆಯು ವಿವಿಧ ದೇಶಗಳ ಮತ್ತು ಪ್ರದೇಶಗಳ ನಡುವೆ ಇನ್ನೂ ಗಮನಾರ್ಹವಾಗಿ ಭಿನ್ನವಾಗಿದೆ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News