ಗಾಂಧಿಗಳ ವಿರುದ್ಧ ಮಾತನಾಡಿದ್ದಕ್ಕೆ ನನ್ನನ್ನು, ಮಗಳನ್ನು ಗುರಿಪಡಿಸಲಾಗಿದೆ: ಸ್ಮೃತಿ ಇರಾನಿ ಹೇಳಿಕೆ

Update: 2022-07-23 13:49 GMT

ಹೊಸದಿಲ್ಲಿ: ನಾನು ಗಾಂಧಿಗಳ ವಿರುದ್ಧ ಮಾತನಾಡುತ್ತೇನೆ ಎಂಬ ಕಾರಣಕ್ಕೆ ಕಾಂಗ್ರೆಸ್ ನನ್ನ ಮಗಳನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಇಂದು ಮಧ್ಯಾಹ್ನ ಮಾಧ್ಯಮಗಳನ್ನುದ್ದೇಶಿಸಿ ಹೇಳಿದ್ದಾರೆ. ಭಾವನಾತ್ಮಕವಾಗಿ ಮಾತನಾಡಿದ ಇರಾನಿ, ತಮ್ಮ ಮಗಳು ಗೋವಾದಲ್ಲಿ ಅಕ್ರಮ ಬಾರ್ ನಡೆಸುತ್ತಿದ್ದಾರೆ ಎಂಬ ಕಾಂಗ್ರೆಸ್ ಪಕ್ಷದ ಆರೋಪಗಳನ್ನು ನಿರಾಕರಿಸಿದರು.

18ರ ಹರೆಯದ ಯುವತಿಯೊಬ್ಬಳ ಚಾರಿತ್ರ್ಯಹರಣ ಮಾಡಲು ಇಬ್ಬರು ಮಧ್ಯವಯಸ್ಕ ಕಾಂಗ್ರೆಸ್ಸಿಗರೇ ಕಾರಣರಾಗಿದ್ದಾರೆ. ಆಕೆಯ ತಾಯಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಬಗ್ಗೆ ಮಾತನಾಡಿದ್ದು ಮಾತ್ರ ಆಕೆಯ ತಪ್ಪು ಎಂದು ಕಾಂಗ್ರೆಸ್ ಆರೋಪವನ್ನು ತಳ್ಳಿಹಾಕಿದ್ದಾರೆ.

"ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರು ಮಾಡಿದ 5,000 ಕೋಟಿ ರೂಪಾಯಿ ಹಗರಣದ ಬಗ್ಗೆ ಆಕೆಯ ತಾಯಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದೇ ಆಕೆಯ ತಪ್ಪು" ಎಂದು ಸ್ಮೃತಿ ಇರಾನಿ ಹೇಳಿದರು. "ನನ್ನ ಮಗಳು ರಾಜಕಾರಣಿಯಲ್ಲ, ವಿದ್ಯಾರ್ಥಿನಿಯಾಗಿ ಸಾಮಾನ್ಯ ಜೀವನ ನಡೆಸುತ್ತಿದ್ದಾಳೆ" ಎಂದು ಅವರು ಹೇಳಿದರು.

"ನನ್ನ ಮಗಳು ಕಾಲೇಜಿನಲ್ಲಿ ಓದುತ್ತಾಳೆ, ಅವಳು ಬಾರ್ ನಡೆಸುತ್ತಿಲ್ಲ, ದಯವಿಟ್ಟು ಪೇಪರ್‌ಗಳನ್ನು ಪರಿಶೀಲಿಸಿ. ನನ್ನ ಮಗಳ ಹೆಸರು ಎಲ್ಲಿದೆ? ಅವರು ಮಾಹಿತಿ ಹಕ್ಕು (ಆರ್‌ಟಿಐ) ಆಧಾರದ ಮೇಲೆ ನನ್ನ ಮಗಳ ಮೇಲೆ ಆರೋಪ ಮಾಡುತ್ತಿದ್ದಾರೆ" ಎಂದು ಅವರು ಹೇಳಿದರು.

"ನಾನು ನ್ಯಾಯಾಲಯದಲ್ಲಿ ಮತ್ತು ಜನರ ನ್ಯಾಯಾಲಯದಲ್ಲಿ ಉತ್ತರವನ್ನು ಹುಡುಕುತ್ತೇನೆ. ರಾಹುಲ್ ಗಾಂಧಿಯನ್ನು ಮತ್ತೊಮ್ಮೆ ಅಮೇಥಿಗೆ ಕಳುಹಿಸಿ. ಹಮ್ ಫಿರ್ ರಾಹುಲ್ ಗಾಂಧಿ ಕೋ ಧೂಲ್ ಚಟಾಂಗೆ (ನಾವು ಮತ್ತೊಮ್ಮೆ ರಾಹುಲ್ ಗಾಂಧಿಯನ್ನು ಸೋಲಿಸುತ್ತೇವೆ)" ಎಂದು ಕೇಂದ್ರ ಸಚಿವೆ ಹೇಳಿದರು.

ಇಂದು ಸಂಜೆಯೊಳಗೆ ಹಿರಿಯ ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್ ಮತ್ತು ಪವನ್ ಖೇರಾ ಅವರಿಗೆ ತಮ್ಮ ತಂಡ ಲೀಗಲ್ ನೋಟಿಸ್ ಕಳುಹಿಸಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಸ್ಮೃತಿ ಇರಾನಿ ಅವರ ಪುತ್ರಿ ಜೊಯಿಶ್ ಗೋವಾದಲ್ಲಿ ರೆಸ್ಟೋರೆಂಟ್ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದ್ದು, ಅದರಲ್ಲಿ 'ನಕಲಿ ಪರವಾನಗಿ' ಮೇಲೆ ಬಾರ್ ಕಾರ್ಯನಿರ್ವಹಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ನರೇಂದ್ರ ಮೋದಿ ಸರ್ಕಾರ ಸ್ಮೃತಿ ಇರಾನಿ ಅವರನ್ನು ವಜಾಗೊಳಿಸಬೇಕು ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News